Advertisement

ಕೊಂಡೋತ್ಸವದೊಂದಿಗೆ ಸಿಡಿ ಹಬ್ಬ ಸಂಪನ್ನ

12:37 PM Feb 28, 2021 | Team Udayavani |

ಮಳವಳ್ಳಿ: ಸಂಪ್ರದಾಯ ಬದ್ಧವಾಗಿ ಸರಳ ರೀತಿಯಲ್ಲಿ ನಡೆದ ಜಾತ್ಯಾತೀತ ಭಾವೈಕ್ಯತೆಯ ಸಂಕೇತವಾದ ಪಟ್ಟಣದ ಪಟ್ಟಲದಮ್ಮನ ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ಮೂಲಕ ತೆರೆ ಬಿದ್ದಿದೆ.

Advertisement

ಕೋವಿಡ್‌-19 ಸೋಂಕಿನಿಂದ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂಬ ನಿಯಮದಲ್ಲಿ ಧ್ವನಿವರ್ಧಕ, ಮನರಂಜನೆ, ಬ್ಯಾನರ್‌ ಹಾಕುವುದನ್ನು ನಿಷೇಧಿಸಿದ್ದರಿಂದ ಭಕ್ತರ ಸಂಖ್ಯೆ ಸಾಮಾನ್ಯವಾಗಿತ್ತು.ಯಾವುದೇ ಆಡಂಬರವಿಲ್ಲದೇ ಸರಳವಾಗಿ ನಡೆಯಿತು.ಸಂಪ್ರದಾಯವಾಗಿ ನಡೆದುಕೊಂಡು ಬಂದಿದ್ದ ಪದ್ಧತಿಯಂತೆ ಘಟ್ಟದ ಮೆರವಣಿಗೆಯು ಪೇಟೆಒಕ್ಕಲಿಗೇರಿ ಬೀದಿಯಿಂದ ಆರಂಭವಾಯಿತು. ನಂತರ ಸಿದ್ದಾರ್ಥ ನಗರ, ಕೀರ್ತಿ ನಗರ, ಗಂಗಾಮತಸ್ಥ ಬೀದಿ, ಅಶೋಕ್‌ ನಗರ ದೊಡ್ಡಪಾಲು, ಚಿಕ್ಕಪಾಲು, ಬಸವಲಿಂಗಪ್ಪ ನಗರದಿಂದ ನಿಗದಿತ ಸಮಯಕ್ಕೆ ಸರಿಯಾಗಿ ಘಟ್ಟ ಹೊತ್ತ ಮಹಿಳೆಯರು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಐತಿಹಾಸಿಕ ಸಿಡಿ ಆಚರಣೆ: ಕೋಟೆ ಪಟೇಲ್‌ ಚಿಣ್ಣೇಗೌಡರ ಮನೆಯ ಮುಂದೆ ಕಟ್ಟಿದ ಸಿಡಿಯನ್ನು ಎಳೆಯಲು ಸಿದ್ದಾರ್ಥ ನಗರ ನಿವಾಸಿಗಳು ಕೊಟ್ಟ ಅಗ್ಗವನ್ನು ಸಿಡಿ ಎಳೆಯಲು ಕಟ್ಟಲಾಯಿತು. ಗಂಗಾಮತಸ್ಥ ಬೀದಿಯ ಪಟ್ಟಲದಮ್ಮ ದೇವಸ್ಥಾನದಲ್ಲಿ ಸಿಡಿರಣ್ಣನ ಗೊಂಬೆಯನ್ನು ತಂದು ಸಿಡಿ ಮರಕ್ಕೆ ಕಟ್ಟಿದ್ದರು. ರಾತ್ರಿ 12 ಗಂಟೆ ಸಮಯಲ್ಲಿ ಸಿಡಿಗೆ ಪೂಜೆ ಸಲ್ಲಿಸಿ, ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು.

ಕೋಟೆ ಬೀದಿಯ ಯುವಕರು ಪಟ್ಟಣಾದ್ಯಂತ ಸಿಡಿ ಬಂಡಿಯನ್ನು ಎಳೆದುಕೊಂಡು ಬಂದರು. ಶಾರ್ಗಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ ಮುಖಾಂತರ ಪೇಟೆ ಬೀದಿ, ಗಂಗಾಮತ ಬೀದಿ ಮೂಲಕ ಅನಂತರಾಮ್‌ ಸರ್ಕಲ್‌ನಿಂದ ಸುಲ್ತಾನ್‌ ರಸ್ತೆಯ ಪಟ್ಟಲದಮ್ಮ ದೇವಾಲಯಕ್ಕೆ ಸಾಗಿ ಮೂರು ಸುತ್ತು ಸುತ್ತಿದ ನಂತರ ಸಿಡಿಯನ್ನು ಅಂತಿಮಗೊಳಿಸಲಾಯಿತು. ಹೊಸದಾಗಿ ಮದುವೆಯಾದ ದಂಪತಿಗಳು ಸೇರಿದಂತೆ ಹಲವರು ಹಣ್ಣು ಜವನ ಎಸೆದು ಸಿಡಿಗೆ ನಮಿಸಿದರು.

ಕೊಂಡಕ್ಕೆ ಚಾಲನೆ: ಪಟ್ಟಲದಮ್ಮ ದೇಗುಲದ ಉಸ್ತು ವಾರಿ ಸಮಿತಿ ಕೊಂಡ ಹಾಯಲು ಬೇಕಾದ ಕ್ರಮದ ನಡುವೆ ಗಂಗಾಮತಸ್ಥ ಬೀದಿಯ ಅಡ್ಡೆನಿಂಗ ಯ್ಯನ ಕೇರಿಯ ನಿವಾಸಿಗಳಾದ ರವಿ, ಮಾದೇಶ್‌ ಸೇರಿದಂತೆ 5 ಮಂದಿ ಉಪವಾಸ ಮಾಡಿಕೊಂಡು ಮೊದಲು ಕೊಂಡಹಾದರು. ನಂತರ ಹರಕೆಹೊತ್ತ ಹಲವರು ಕೊಂಡಹಾಯುವುದರ ಮೂಲಕ ಹರಕೆ ತೀರಿಸಿದರು.

Advertisement

ಗಣ್ಯರಿಂದ ದರ್ಶನ: ದೇವಸ್ಥಾನದ ಆವರಣದ್ದ ಪಟ್ಟಲದಮ್ಮ, ಚಿಕ್ಕಮ್ಮತಾಯಿ, ದೊಡ್ಡಮ್ಮ ತಾಯಿ, ಹುಲಗೆರೆ ಹುಚ್ಚಮ್ಮ ದೇವರ ದರ್ಶನವನ್ನು ಶಾಸಕ ಕೆ. ಅನ್ನದಾನಿ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್‌ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಡೆದರು. ದೇಗುಲ ಆವರಣದ ಅಕ್ಕ-ಪಕ್ಕ ಬಿಟ್ಟರೆ ಉಳಿದೆಡೆ ಹಬ್ಬದ ವಾತಾವರಣ ಕಂಡು ಬರಲಿಲ್ಲ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿತ ವತಿಯಿಂದ ಸಿಹಿ ವಿತರಿಸಲಾಯಿತು.

ಲಾಠಿ ಬೀಸಿದ ಪೊಲೀಸರು :

ಕೊಂಡ ಹಾಯುವುದನ್ನು ನೋಡಲು ಸಾವಿರಾರು ಮಂದಿ ಆಗಮಿಸಿದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಪೊಲೀಸರು ಅದನ್ನು ಶಾಂತ ರೀತಿಯಲ್ಲಿ ನಿಭಾಯಿಸದೇ ಏಕಾಏಕಿ ಲಾಠಿ ಬೀಸಿದರು. ಇದ್ದರಿಂದಾಗಿ ಸ್ಪಲ್ಪ ಕಾಲ ಗೊಂದಲ ಉಂಟಾಯಿತು. ಸ್ಥಳದಲ್ಲಿದ್ದ ಹಿರಿಯ ಪೊಲೀಸರ ಅದನ್ನು ನಿಯಂತ್ರಿಸಲು ವಿಫಲರಾದರು.ಭಕ್ತರಿಂದ ತುಂಬಿ ತುಳುಕುತ್ತಿದ್ದ ದೇವಸ್ಥಾನದ ಆವರಣದಲ್ಲಿ ಲಾಠಿ ಬೀಸಿದ್ದು, ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ತಾಲೂಕು ಆಡಳಿತದ ಆದೇಶ ಉಲ್ಲಂಘನೆ :

ಸಿಡಿಹಬ್ಬದ ಹಿನ್ನಲೆಯಲ್ಲಿ ದೇವಸ್ಥಾನದ ಆವರಣ ಮತ್ತು ಅಕ್ಕ-ಪಕ್ಕದದಲ್ಲಿ ಯಾವುದೇ ಅಂಗಡಿ ಮುಗ್ಗಟ್ಟು ಜಾತ್ರೆ ಕಟ್ಟಬಾರದು ಎಂದು ತಾಲೂಕು ಆಡಳಿತ ಆದೇಶ ಹೊರಡಿಸಿದರು. ಆದರೆ, ಆದೇಶಕ್ಕೆ ಕ್ಯಾರೆ ಎನ್ನದೇ ಹಲವು ಮಂದಿ ಅಂಗಡಿ-ಮುಗ್ಗಟ್ಟುಗಳನ್ನು ನಿರ್ಮಿಸಿ ವ್ಯಾಪಾರದಲ್ಲಿ ತೊಡಗಿದ್ದರು. ಅಲ್ಲದೆ, ದರ್ಶನಕ್ಕೆ ಬಂದ ಭಕ್ತರು ಯಾರೂ ಕೋವಿಡ್‌-19 ನಿಯಮದಂತೆ ಮಾಸ್ಕ್, ಅಂತರವಾಗಲಿಕಾಯ್ದುಕೊಳ್ಳಲಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಎಚ್‌. ಲಕ್ಷೀನಾರಾಯಣ್‌ ಪ್ರಸಾದ್‌ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next