Advertisement

ಯಶಸ್ವಿಯಾಗಿ ಸಂಪನ್ನಗೊಂಡ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ

05:42 PM Oct 17, 2021 | Team Udayavani |

ದಾಂಡೇಲಿ: ನಗರದ ಗಾಂಧಿನಗರದ ಸಾಯಿ ಯುವಕ ಮಂಡಳದ ಆಶ್ರಯದಲ್ಲಿ ಹಳೆ ನಗರ ಸಭಾ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ ಪ್ರೊ ಕಬಡ್ಡಿ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು. ಶನಿವಾರ ರಾತ್ರಿ ಆರಂಭವಾದ ಪಂದ್ಯಾವಳಿ ಭಾನುವಾರ ಬೆಳಿಗ್ಗೆ ಮುಕ್ತಾಯ ಗೊಂಡಿತು.

Advertisement

ನಗರದಲ್ಲಿ ಮೊದಲ ಬಾರಿಗೆ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಉದ್ಘಾಟಿಸಿ, ಪರಸ್ಪರ ಸೌಹಾರ್ಧತೆ ಮತ್ತು ಉತ್ತಮ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಾಯಿ ಯುವಕ ಮಂಡಳದವರು ಕ್ರೀಡಾ ಉತ್ಸಾಹದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಹೇಳಿ ಸಾಯಿ ಯುವಕ ಮಂಡಳದ ಕಾರ್ಯವನ್ನು ಶ್ಲಾಘಿಸಿ ಪಂದ್ಯಾವಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಪಂದ್ಯಾವಳಿಯ ಸಂಘಟಕ ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪಂದ್ಯಾವಳಿಯ ಯಶಸ್ಸಿಗೆ ಎಸ್.ಎಲ್.ಘೋಟ್ನೇಕರ ಅವರು ಹಾಗೂ ದಾನಿಗಳು ತುಂಬು ಹೃದಯದ ಸಹಕಾರ ನೀಡಿರುವುದರಿಂದ ಪಂದ್ಯಾವಳಿಯನ್ನು ಆಯೋಜಿಸಲು ಸಾಧ್ಯವಾಯ್ತು ಎಂದರು. ಸಾಯಿ ಯುವಕ ಮಂಡಳದ ಪರವಾಗಿ ಸಂಘಟಕರುಗಳಾದ ಮಹೇಶ್, ಸಂಜು, ರಾಘವೇಂದ್ರ ಮತ್ತು ಸ್ಯಾಮಸನ್ ಅವರುಗಳು ಎಸ್.ಎಲ್.ಘೋಟ್ನೇಕರ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಯುವ ನ್ಯಾಯವಾದಿ ವಿಶ್ವನಾಥ ಜಾಧವ್, ಮುಖಂಡರುಗಳಾದ ದಾದಾಪೀರ್ ನದಿಮುಲ್ಲಾ, ರಾಮಲಿಂಗ ಜಾಧವ್, ರವಿ ಸುತಾರ್, ಗಣೇಶ ಖಾನಪುರಿ, ಅಜೀತ್ ಥೋರಾತ್, ಶ್ರೀನಾಥ್ ಮಿರಾಶಿ, ವಿಜಯ್ ಮಿರಾಶಿ, ಕೃಷ್ಣ ಗೌಡ, ಸಂತೋಷ ತಾಂಬೂಡಾ, ಸಂದೀಪ್ ಸಿದ್ದಾನಿ ಹಾಗೂ ಸಾಯಿ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ನೋಡಲು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೂಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಕೊಲ್ಲಾಪುರದ ಶಿವಮುದ್ರ ತಂಡ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ನಗರದ ಗಾಂಧಿನಗರದ ಎಸ್.ವೈ.ಎಂ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕೊಲ್ಲಾಪುರದ ಜೈ ಶಿವರಾಯಿ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿತು. ಹಳಿಯಾಳದ ಮಲ್ವಾಡಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಪಂದ್ಯಾವಳಿಯಲ್ಲಿ ಉತ್ತಮ ಕ್ಯಾಚರ್ ಹಾಗೂ ಸವ್ಯಸಾಚಿ ಆಟಗಾರರಾಗಿ ಕೊಲ್ಲಾಪುರದ ಶಿವಮುದ್ರ ತಂಡದ ಅತುಲ್ ಮತ್ತು ಮೋಹನ್ ಕ್ರಮವಾಗಿ ಬಹುಮಾನವನ್ನು ಪಡೆದುಕೊಂಡರು. ಎಸ್.ವೈ.ಎಂ ತಂಡದ ರಾಮು ಗಾವಡೆ ಉತ್ತಮ ದಾಳಿಗಾರನಾಗಿ ಬಹುಮಾನಕ್ಕೆ ಪಾತ್ರರಾದರು. ಅತ್ಯುತ್ತಮ ತಂಡಕ್ಕೆ ನೀಡುವ ಪ್ರಶಸ್ತಿ ಹಳಿಯಾಳದ ಮಲ್ವಾಡಿ ತಂಡದ ಪಾಲಾಯ್ತು.

Advertisement

ಬಹುಮಾನ ವಿತರಣೆಯನ್ನು ಯುವ ನ್ಯಾಯವಾದಿ ಹಾಗೂ ಶ್ರೀ.ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಜಾಧವ್, ನಗರ ಸಭಾ ಸದಸ್ಯ ಬುದ್ದಿವಂತ ಗೌಡ ಪಾಟೀಲ, ಸಮಾಜ ಸೇವಕ ದಾದಾಪೀರ್ ನದೀಮುಲ್ಲಾ, ಮಾಜಿ ನಗರ ಸಭಾ ಸದಸ್ಯ ರವಿ ಸುತಾರ್, ಮುಖಂಡರುಗಳಾದ ಸಂತೋಷ ಸೋಮನಾಚೆ, ಗಣೇಶ ಖಾನಪುರಿ, ಕೃಷ್ಣ ಗೌಡ, ಸಂತೋಷ ತಾಂಬೂಡಾ, ವಿಜಯ್ ಮಿರಾಶಿ, ಶ್ರೀನಾಥ್ ಮಿರಾಶಿ ಮೊದಲಾದವರು ನೀಡಿದರು.

ಪಂದ್ಯಾವಳಿಯ ಯಶಸ್ಸಿಗೆ ಸಾಯಿ ಯುವಕ ಮಂಡಳದ ಮಹೇಶ್, ಸಂಜು, ರಾಘವೇಂದ್ರ, ಸ್ಯಾಮಸನ್ ಅಹರ್ನಿಶಿ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next