Advertisement
ವಿಧಾನಪರಿಷತ್‌ನಲ್ಲಿ ಡಾ| ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒತ್ತುವರಿಯಾಗಿರುವ 3.89 ಲಕ್ಷ ಎಕರೆ ಭೂಮಿಯಲ್ಲಿ 2.73 ಲಕ್ಷ ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ. ರಾಜ್ಯಾದ್ಯಂತ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದ ಯಾವುದೇ ಪ್ರದೇಶದಲ್ಲಿನ ಗೋಮಾಳ ಮತ್ತು ಖರಾಬು ಹಾಗೂ ಸರಕಾರದ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮದಂತೆ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ವಿಧಾನಪರಿಷತ್‌ದಲ್ಲಿ ಸದಸ್ಯ ಕೆ. ಹರೀಶಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ನಗರ ಪೌರಮಿತಿಯೊಳಗಿನ ಸರಕಾರಿ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾಗುತ್ತದೆ. ಮುಖ್ಯ ವಾಗಿ ರಾಜ್ಯದಲ್ಲಿ ಜಾಗದ ಕೊರತೆ ಬಹಳವಾಗಿದೆ. ಶ್ಮಶಾನ, ಶಾಲೆಗಳ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ ಎಂದರು. ಈಗ ಅಲ್ಪಸ್ವಲ್ಪ ಜಮೀನುಗಳನ್ನು ಖಾಸಗಿಯವರಿಂದ ಖರೀದಿಸಿ ಶ್ಮಶಾನಕ್ಕೆ ಕೊಡಬೇಕಾದ ಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರದ ಜಮೀನುಗಳನ್ನು ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದರು.