ಸಿಂದಗಿ: ತೋಟಗಾರಿಕೆ ಬೆಳೆಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪ್ರೋತ್ಸಾಹದಾಯಕ ಯೋಜನೆಗಳನ್ನು ಕೈಗೊಂಡಿವೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ಹೇಳಿದರು.
ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಯೋಜನೆಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಕಾರ್ಯ ಮಾಡಲಾಗುವುದು. ಅಲ್ಲದೇ ತೋಟಗಾರಿಕೆ ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮೂಲಕ ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ನಿರ್ಮಿಸಬೇಕು. ರೈತರು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳ ಬೇಕು ಎಂದು ಹೇಳಿದರು. ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗ ದೇವ ಶಿವಾಚಾರ್ಯರು, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಜಯಪುರ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿದರು.
ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಜಂಟಿ ಕೃಷಿ ನಿರ್ದೇಶಕ ಡಾ| ರಾಜಶೇಖರ ವಿಲಿಯಮ್ಸ್, ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ತೋಟಗಾರಿಕೆ ಉಪ ನಿರ್ದೇಶಕ ಎಸ್.ಎಂ. ಬರಗಿಮಠ, ನಿಂಬೆ ಅಭಿವೃದ್ಧಿ ಮಂಡಳಿಯ ಎಂ.ಡಿ. ಸಂತೋಷ ವೇದಿಕೆಯಲ್ಲಿದ್ದರು. ಬಿ.ಪಿ. ಹುಲಸಗುಂದ, ಸುಭಾಷ್ ಜಾಲವಾದಿ, ಗಂಗಾಧರ ಪವಾರ, ರೇವಣಸಿದ್ದಪ್ಪ ಬಡಾನೂರ, ಶೈಲಜಾ ಸ್ಥಾವರಮಠ, ರಮೇಶ ಪೂಜಾರ, ಶಂಕರಲಿಂಗ ನಿಗಡಿ, ಮಲ್ಲಣ್ಣ ಅಂಬಲಿ, ನಿಂಗಪ್ಪ ಭಾವಿಕಟ್ಟಿ, ನಿವೇದಿತಾ ಹಿರೇಮಠ ಇದ್ದರು.