ಪುರಭವನ: ಮಕ್ಕಳ ಪ್ರತಿಭೆಯನ್ನು ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಅದನ್ನು ಬೆಳಕಿಗೆ ತರಲು ಪ್ರೋತ್ಸಾಹಿಸಬೇಕು ಹಾಗೂ ಅವರು ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಕರೆ ನೀಡಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಪ್ರಚಾರ ಸಂಚಾಲನ್ ಸಹಯೋಗದಲ್ಲಿ ಕೊಂಕಣಿ ಭಾಷೆಯ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬದ ಅಂಗವಾಗಿ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊಂಕಣಿ ಮಕ್ಕಳ ದಿನಾಚರಣೆಯನ್ನು ಅವರು ಉದ್ಘಾಟಿಸಿದರು. ಕೊಂಕಣಿ ಎಲ್ಲ ಜಾತಿ ಮತ್ತು ಧರ್ಮದವರು ಮಾತನಾಡುವ ಭಾಷೆ. ಕೊಂಕಣಿ ಅಕಾಡೆಮಿ ಮತ್ತು ಕೊಂಕಣಿ ಪ್ರಚಾರ ಸಂಚಾಲನ್‌ನಂತಹ ಸಂಸ್ಥೆಗಳು ಕೊಂಕಣಿ ಮಾತೃ ಭಾಷೆಯ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಅಧ್ಯಕ್ಷತೆ ವಹಿಸಿ,ಕೊಂಕಣಿಯನ್ನು ಉಳಿಸುವ ಜವಾಬ್ದಾರಿ ಕೊಂಕಣಿ ಮಕ್ಕಳ ಮೇಲಿದೆ ಎಂದು ಹೇಳಿದರು. ಕೊಂಕಣಿ ಪ್ರಚಾರ ಸಂಚಾಲರಾದ ಮುಖ್ಯಸ್ಥ ಹಾಗೂ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟೆಲಿನೊ ಮಾತನಾಡಿ, ದೇಶದ 22 ರಾಷ್ಟ್ರೀಯ ಭಾಷೆಗಳಲ್ಲಿ ಕೊಂಕಣಿಯೂ ಒಂದು. ಇದು ನಮಗೆ ಅಭಿಮಾನದ ಸಂಗತಿ. ಕೊಂಕಣಿ ಮಾತೃ ಭಾಷಿಕ ಮಕ್ಕಳಿಗೆ ಶಾಲೆಗಳಲ್ಲಿ ಕೊಂಕಣಿ ಮಾತನಾಡಲು ಅವಕಾಶ ನಿರಾಕರಿಸಬಾರದು. ಹಾಗೇನಾದರೂ ನಿರಾಕರಿಸಿದರೆ ನಮಗೆ ತಿಳಿಸಿ ಎಂದರು.
ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಡಾ| ಬಿ. ದೇವದಾಸ್ ಪೈ ಪ್ರಸ್ತಾವನೆಗೈದು ಯುವ ಪೀಳಿಗಾಗಿ ಕಾರ್ಯಕ್ರಮಗಳನ್ನು ಮಾಡಿದಾಗ ಅದು ಹೆಚ್ಚು ಪರಿಣಾಮಕಾರಿ ಆಗುತ್ತದೆ. ಕೊಂಕಣಿ ಬಗ್ಗೆ ಪ್ರೀತಿ ಉಕ್ಕಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದರು.
ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಸ್ಟ್ಯಾನಿ ಅಲ್ವಾರಿಸ್ ಸ್ವಾಗತಿಸಿದರು. ಪ್ರಚಾರ ಸಂಚಾಲನ್ ಅಧ್ಯಕ್ಷ ಲಾರೆನ್ಸ್ ಡಿ’ಸೋಜಾ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು, ಪ್ರಚಾರ ಸಂಚಾಲನ್‌ನ ಕಾರ್ಯದರ್ಶಿ ಜೇಮ್ಸ್ ಡಿ’ಸೋಜಾ ವೇದಿಕೆಯಲ್ಲಿದ್ದರು. 14 ಆಯ್ದ ಶಾಲೆಗಳ ಮಕ್ಕಳು ವಿವಿಧ ಕೊಂಕಣಿ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಮಕ್ಕಳಿಗೆ ಮೊಬೈಲ್ ಕೊಡದಿರಿ
ಚಿಕ್ಕ ಮಕ್ಕಳು ಹೆಚ್ಚು ಕಿರಿಕ್ ಮಾಡುವಾಗ ಹೆತ್ತವರು ಅವರಿಗೆ ಆಟವಾಡಲು ಮೊಬೈಲ್ ಫೋನ್ ಕೊಡುತ್ತಾರೆ. ಮೊಬೈಲ್‌ನಲ್ಲಿ ಆಟ ಆಡಿದರೆ ಏನೂ ಸಿಗುವುದಿಲ್ಲ. ಟೈಮ್ ಪಾಸ್ ಆದದ್ದೇ ಗೊತ್ತಾಗುವುದಿಲ್ಲ. ಮೊಬೈಲ್ ಬದಲು ಮಕ್ಕಳಿಗೆ ದಿನಕ್ಕೆ ಅರ್ಧ ತಾಸು ಕಾಲ ಟಿ.ವಿ.ಯಲ್ಲಿ ಬರುವ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಮಾಡಿ ಕೊಡಿ ಎಂದು ಮೇಯರ್ ಸಲಹೆ ಮಾಡಿದರು.