Advertisement

ನಾಟಕ ಕಲಾವಿದರನ್ನು ಪ್ರೋತ್ಸಾಹಿಸಿ

09:04 PM Mar 11, 2021 | Team Udayavani |

ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್‌ ಸಂದರ್ಭದಲ್ಲಿ ಸುಮಾರು 1ವರ್ಷ ಯಾವುದೇ ಕೆಲಸ ಕಾರ್ಯಗಳಿಲ್ಲದೆ, ಕಲಾವಿದರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಕುಂಟೋಜಿಯ ಶ್ರೀ ಘನಮಠೇಶ್ವರ ನಾಟ್ಯ ಸಂಘದ ಅಧ್ಯಕ್ಷೆ ಜ್ಯೋತಿ ಮಂಗಳೂರು ತಿಳಿಸಿದರು.

Advertisement

ಪಟ್ಟಣದಲ್ಲಿ ಮಾತನಾಡಿದ ಅವರು, ದೂರದರ್ಶನ, ಸೋಶಿಯಲ್‌ ಮೀಡಿಯಾ ಮತ್ತು ಸಿನಿಮಾ ರಂಗದ ಜೊತೆಗೆ ರಂಗಭೂಮಿ ಕಲಾವಿದರು ಪೈಪೋಟಿ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಶ್ರೀ ಘನಮಠೇಶ್ವರ ನಾಟ್ಯ ಸಂಘದಿಂದ ನಾಡಿನಾದ್ಯಂತ ಹಲವು ವರ್ಷಗಳಿಂದಲೂ ನಾಟಕಗಳನ್ನು ಪ್ರದರ್ಶನ ನೀಡುತ್ತ ಬಂದಿದ್ದೇವೆ. ಮೊದಲಿನ ಹಾಗೆ, ಕಂಪನಿ ನಾಟಕಗಳಿಗೆ ಜನರ ಪ್ರೋತ್ಸಾಹ ಕಡಿಮೆಯಾಗಿದೆ. ಆದರೂ ನಾವು ಕಲೆಯನ್ನೇ ಆರಾಧಿ ಸುತ್ತ ಬಂದವರು, ಕಲಾವಿದ ಆಗಿರುವುದರಿಂದ ಅಭಿನಯ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌ ನಿಯಾಮವಳಿಗಳನ್ನು ಸಡಿಲಗೊಳಿಸುವ ಮೂಲಕ ಮನೋರಂಜನಾ ಕ್ಷೇತ್ರ ಪುನರಾರಂಭಗೊಳ್ಳಲು ಅನುವು ಮಾಡಿಕೊಟ್ಟಿರುವುದರಿಂದ ನಮ್ಮ ಕುಟುಂಬ ವರ್ಗದ ತುತ್ತಿನ ಚೀಲ ತುಂಬಿಸಲು ಬಣ್ಣದ ಬದುಕಿನ ಜಟಕಾಬಂಡಿಯನ್ನು ಆರಂಭಿಸಿದ್ದೇವೆ.

ಪಟ್ಟಣದಲ್ಲಿ ಮಾ. 12ರ ಶುಕ್ರವಾರದಿಂದ ನಮ್ಮ ನಾಟ್ಯ ಸಂಘದ ವತಿಯಿಂದ “ಬಂದರ ನೋಡ ಬಂಗಾರಿ’ ಎಂಬ ಹಾಸ್ಯಮಯ ಕೌಟಂಬಿಕ ನಾಟಕವನ್ನು ಪ್ರದರ್ಶಿಸುವ ಮೂಲಕ ದಿನನಿತ್ಯ ಸಂಜೆ 6.15 ಹಾಗೂ ರಾತ್ರಿ 9.30ಕ್ಕೆ ಎರಡು ಪ್ರದರ್ಶನಗಳನ್ನು ನಡೆಸಲಾಗುವುದು. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿ ಕೇವಲ 50ರೂಗಳ ಟಿಕೆಟ್‌ ದರ  ನಿಗದಿಪಡಿಸಲಾಗಿದೆ. ತಹಶೀಲ್ದಾರ್‌ರು, ಪುರಸಭೆ, ಜೆಸ್ಕಾಂ ಹಾಗೂ ಪೊಲೀಸ್‌ ಇಲಾಖೆಯ ಎಲ್ಲ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದ್ದರಿಂದ ಕಲಾಮನಸ್ಸುಗಳು ನಮ್ಮ ನಾಟಕಗಳನ್ನು ನೋಡುವ ಮೂಲಕ ಕಲಾವಿದರನ್ನು ಹರಸಿ, ಹಾರೈಸಿ, ಆಸರೆಯಾಗಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂಪನಿ ಮಾಲೀಕ ಮಲ್ಲೇಶ್‌ ದಂಡಿನ್‌, ಮ್ಯಾನೇಜರ್‌ ಗುರುಲಿಂಗಸ್ವಾಮಿ ಹಿರೇಮಠ, ಕಲಾವಿದರಾದ ಪುಟ್ಟರಾಜ, ಗಣೇಶ, ಮಲ್ಲಣ್ಣ, ಯಲ್ಲಪ್ಪ ಇತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next