Advertisement

ಮನ್ಸೂಖ್‌ ಕೊಲೆ ಪ್ರಕರಣ ಭೇದಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌

11:47 AM Mar 27, 2021 | Team Udayavani |

ಮುಂಬಯಿ: ಮನ್ಸೂಖ್‌ ಹಿರೇನ್‌ ಕೊಲೆ ಪ್ರಕರಣದ ತನಿಖೆ ನಡೆಸಲು ಈಗಾಗಲೇ ಆರು ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ ಕನ್ನಡಿಗ, ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಅವರಿಗೆ ಮುಂಬಯಿ ಪಶ್ಚಿಮ ವಲಯ ಎಟಿಎಸ್‌ ಘಟಕದ ಉಸ್ತುವಾರಿ ವಹಿಸಲಾಗಿದೆ. ಈಗಾಗಲೇ ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ದಯಾ ನಾಯಕ್‌ ಅವರ ಪಾತ್ರ ಮುಖ್ಯವೆಂದು ಪರಿಗಣಿಸಲಾಗಿದೆ.

Advertisement

ಮನ್ಸೂಖ್‌ ಹಿರೇನ್‌ ಕೊಲೆ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಈಗಾಗಲೇ ಎಟಿಎಸ್‌ ಡಿಐಜಿ ಶಿವದೀಪ್‌ ಲಾಂಡೆ ಹೇಳಿದ್ದಾರೆ. ಪ್ರಮುಖ ಆರೋಪಿ ಸಚಿನ್‌ ವಾಝೆ ಎಂಬುವುದು ಬೆಳಕಿಗೆ ಬಂದಿರುವ ಮಧ್ಯೆ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ನೇತೃತ್ವದ ತಂಡವು ಮನ್ಸೂಖ್‌ ಹಿರೇನ್‌ ಪ್ರಕರಣದ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದು, ಇನ್ನೂ ಹಲವಾರು ಮಂದಿ ಬಂಧನದ ಭೀತಿಯಲ್ಲಿದ್ದಾರೆ.

ಬಜೆಟ್‌ ಅಧಿವೇಶನದಲ್ಲಿ  ಎಟಿಎಸ್‌ಗೆ ಹಸ್ತಾಂತರ :

ಉದ್ಯಮಿ ಅಂಬಾನಿ ಅವರ ಬಂಗ್ಲೆ ಎದುರು ಪತ್ತೆಯಾದ ಸ್ಫೋಟಕ ತುಂಬಿದ ವಾಹನ ಮತ್ತು ಮನ್ಸೂಖ್‌ ಹಿರೇನ್‌ ಕೊಲೆ ಪ್ರಕರಣದ ತನಿಖೆಯಲ್ಲಿ ಮುಂಬಯಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿಯು ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸರಕಾರವು ಪ್ರಕರಣವನ್ನು ಎಟಿಎಸ್‌ಗೆ ಹಸ್ತಾಂತರಿಸಿತು. ವಿಶೇಷವೆಂದರೆ ಮುಂಬಯಿ ಪಶ್ಚಿಮ ವಲಯ ಎಟಿಎಸ್‌ ಘಟಕದ ಉಸ್ತುವಾರಿ ದಯಾ ನಾಯಕ್‌ ನೇತೃತ್ವದ ತಂಡವು ತನಿಖೆ ಕೈಗೊಂಡ ಎರಡು ದಿನಗಳಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಹಿರೇನ್‌ ಹತ್ಯೆ ಹಿಂದೆ ವಾಝೆ :

Advertisement

ಮನ್ಸೂಖ್‌ ಹಿರೇನ್‌ ಪ್ರಕರಣದಲ್ಲಿ ಎನ್‌ಐಎ ಬಂಧನದಲ್ಲಿದ್ದ ಸಚಿನ್‌ ವಾಝೆ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಹಿರೇನ್‌ ಹತ್ಯೆಯ ಹಿಂದೆ ವಾಝೆ ಕೈವಾಡವಿದೆ ಎಂದು ವಿನಾಯಕ್‌ ಶಿಂಧೆ ಒಪ್ಪಿ ಕೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ ಎಟಿಎಸ್‌ ಡಿಐಜಿ ಶಿವದೀಪ್‌ ಲಾಂಡೆ ಅವರು ಹಿರೇನ್‌ ಕೊಲೆ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಫೇಸ್‌ಬುಕ್‌ ಪೋಸ್ಟ್‌  ಹಾಕಿದ್ದಾರೆ.

ಡ್ರಗ್ಸ್‌ ದಂಧೆಗೆ ಬ್ರೇಕ್‌  ಹಾಕಿದ ದಯಾ ನಾಯಕ್‌ :

ಸತ್ಯ, ನ್ಯಾಯ, ನಿಷ್ಠೆ, ಪ್ರಮಾಣಿಕ ಸೇವೆ ಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ದಯಾ ನಾಯಕ್‌ ಅವರು ಅಂಬೋಲಿ ಪೊಲೀಸ್‌ ಸ್ಪೇಷನ್‌ನಲ್ಲಿ ಅಧಿಕಾರಿಯಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಸಂದರ್ಭ

70ಕ್ಕೂ ಹೆಚ್ಚು ಡ್ರಗ್ಸ್‌ ಪ್ರಕರಣಗಳನ್ನು ಭೇದಿಸಿ ಶ್ಲಾಘನೆಗೆ ಪಾತ್ರರಾಗಿದ್ದರು. ಒಂದು ಹಂತದಲ್ಲಿ ನಗರವನ್ನೇ ತಲ್ಲಣಗೊಳಿಸಿದ ಡ್ರಗ್ಸ್‌ ದಂಧೆಯ ಸುಮಾರು 7ಕ್ಕೂ ಹೆಚ್ಚು ಅಡ್ಡಗಳಿಗೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್‌ ಅನ್ನು ನಾಶ ಮಾಡಿ ಹಲವು ಮಂದಿಯನ್ನು ಬಂಧಿಸಿದ ಶ್ರೇಯಸ್ಸು ದಯಾ ನಾಯಕ್‌ ನೇತೃತ್ವದ ತಂಡಕ್ಕಿದೆ. ಹಲವಾರು ಕೊಲೆ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಖಾರ್‌

ಪೊಲೀಸ್‌ ಠಾಣೆಯಲ್ಲೂ ಒಂದು ವರ್ಷ ಕಾಲ ಸೇವೆ ಸಲ್ಲಿಸಿ ನಗರದಲ್ಲಿ  ಸಾಕಷ್ಟು ಅಪರಾಧ ಪ್ರಕರಣಗಳಿಗೆ ಬ್ರೇಕ್‌ ಹಾಕಿದ್ದಾರೆ. ಅವರ ಪ್ರಾಮಾ ಣಿಕ ಸೇವೆಯನ್ನು ಪರಿಗಣಿಸಿ ಮುಂಬಯಿ ಪಶ್ಚಿಮ ವಲಯ ಎಟಿಎಸ್‌ ಘಟಕಕ್ಕೆ ಭರ್ತಿ ನೀಡಲಾಯಿತು. 2004ರಲ್ಲಿ ಇವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರವೂ ಲಭಿಸಿದೆ.

ಭೂಗತ ಲೋಕದ ನಿದ್ದೆಗೆಡಿಸಿದ್ದ ದಯಾ ನಾಯಕ್‌ :

ಒಂದು ಕಾಲದಲ್ಲಿ ಮುಂಬಯಿಯನ್ನು ಆಳುತ್ತಿದ್ದ ಭೂಗತ ಲೋಕಕ್ಕೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್‌ ಅವರು ಪ್ರಸ್ತುತ ಸುದ್ದಿಯಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಮುಂಬಯಿ ಪೊಲೀಸ್‌ ಇಲಾಖೆಯಲ್ಲಿ ಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದ ದಯಾ ನಾಯಕ್‌ ಅವರು ಮುಂಬಯಿ ಪಶ್ಚಿಮ ವಲಯ ಎಟಿಎಸ್‌ ಉಸ್ತುವಾರಿ ವಹಿಸಿಕೊಂಡು ಹಿರೇನ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬೊಬ್ಬರನ್ನೇ ಬಂಧಿಸುತ್ತಿದ್ದಾರೆ.  1995ರಲ್ಲಿ ದಯಾ ನಾಯಕ್‌ ಅವರು ಮಹಾರಾಷ್ಟ್ರ ಪೊಲೀಸ್‌ ಪಡೆಯಲ್ಲಿ ಸಬ್‌ಇನ್‌ಸ್ಪೆಕ್ಕರ್‌ ಆಗಿ ಸೇವೆಯನ್ನು ಪ್ರಾರಂಭಿಸಿದರು. 1998ರಿಂದ 1999ರ ಮಧ್ಯೆ ಭೂಗತ ಲೋಕದ ಸದ್ದಡಗಿಸಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದು ಪ್ರಸಿದ್ಧರಾದರು. 1996ರಲ್ಲಿ ಮೊದಲ ಎನ್‌ಕೌಂಟರ್‌ನಿಂದ ಹಿಡಿದು ಈವರೆಗೆ ಸುಮಾರು 80 ಎನ್‌ಕೌಂಟರ್‌ಗಳು ಅವರ ಹೆಸರಿನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next