ಹುಬ್ಬಳ್ಳಿ: ಗೃಹ ಸಚಿವರು ಹೇಳಿದಂತೆ ಇದೊಂದು ಆಕಸ್ಮಿಕ ಘಟನೆ. ರಾಜ್ಯದಲ್ಲಿ ಎನ್‌ಕೌಂಟರ್ ಕಾನೂನು ಜಾರಿಗೆ ತಂದರೆ ನೇಹಾ ಹತ್ಯೆಯಂತಹ ಹೇಯ ಕೃತ್ಯಗಳು ನಿಲ್ಲುತ್ತವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಎನ್‌ಕೌಂಟರ್ ಕಾನೂನು ಜಾರಿಗೊಳಿಸಿದರೆ ಯುಪಿ ಮಾದರಿಯ ಬುಲ್ಡೋಜರ್ ಕಾನೂನಿನ ಅಗತ್ಯವೇ ಬರುವುದಿಲ್ಲ. ಬಿಜೆಪಿಯವರು ನೇಹಾಳ ಹತ್ಯೆಯನ್ನು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ರಾಜಕೀಯ ಮಾಡಬಾರದು. ಆದರೆ ಈ ರೀತಿಯ ಘಟನೆಗಳು ನಡೆಯಬಾರದು. ಯಾರೇ ಅಪರಾಧ ಎಸಗಿರಲಿ ಅಂಥವರ ಮೇಲೆ ಕಠಿನ ಕ್ರಮ ಕೈಗೊಳ್ಳಬೇಕು.
ಈ ರೀತಿಯ ಕೃತ್ಯ ಎಸಗುವವರನ್ನು ಎನ್‌ಕೌಂಟರ್ ಮಾಡಬೇಕು. ಹಾಗಾದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಬೀಳುತ್ತದೆ ಎಂದರು. ಕಾಲೇಜುಗಳಲ್ಲಿ ಡ್ರಗ್ ಮಾಫಿಯಾ ಹೆಚ್ಚುತ್ತಿದೆ ಎಂಬ ಆರೋಪವಿದೆ. ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕಬೇಕಿರುವುದು ಕೇಂದ್ರ ಸರಕಾರ.
ಬೇರೆ ದೇಶಗಳಿಂದ ಡ್ರಗ್ಸ್ ಭಾರತಕ್ಕೆ ಸರಬರಾಜು ಆಗುತ್ತದೆ. ಈ ಬಗ್ಗೆ ನಾನು ಈಗ ಹೆಚ್ಚು ಮಾತನಾಡಲ್ಲ. ಈ ಘಟನೆ ಖಂಡಿಸುತ್ತೇನೆ. ಮೃತಳ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತೇನೆ ಎಂದರು.