Advertisement

ವಾಹನ ನೋಂದಣಿ ಮೇಲೆ ಕರಭಾರ

01:00 AM Mar 13, 2019 | Team Udayavani |

ಕುಂದಾಪುರ: ವಾಹನಗಳ ನೋಂದಣಿ ಸಂದರ್ಭ ತೆರಿಗೆ ಜತೆಗೆ ಮೇಲೆ¤ರಿಗೆ ವಿಧಿಸುತ್ತಿರುವ ಸರಕಾರ ಈಗ ಮತ್ತೂಂದು ಕರಭಾರ ಹೊರಿಸುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ವಹಣೆಗಾಗಿ ಪ್ರತೀ ವಾಹನಗಳ ನೋಂದಣಿ ತೆರಿಗೆ ಮೇಲೆ ವಿಧಿಸಲಾಗುತ್ತಿರುವ ಉಪತೆರಿಗೆ ಜತೆಗೆ ಹೆಚ್ಚುವರಿ ಉಪತೆರಿಗೆ (ಸೆಸ್‌) ವಿಧಿಸಲು ಆದೇಶ ಬಂದಿದೆ. ಆದರೆ ಇದಕ್ಕಾಗಿ ಇಲಾಖಾ ಸಾಫ್ಟ್ವೇರ್‌ ಇನ್ನೂ ಸಿದ್ಧಗೊಂಡಿಲ್ಲ. 

Advertisement

ತೆರಿಗೆ ಮತ್ತು ಉಪತೆರಿಗೆ
ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ಹಾಗೂ ಉಪತೆರಿಗೆ ವಸೂಲಾತಿ ದರ ಹೀಗಿದೆ. ಶೋರೂಂ ದರ 50 ಸಾವಿರ ರೂ. ಒಳಗಿರುವ ದ್ವಿಚಕ್ರ ವಾಹನಕ್ಕೆ ಶೇ.10, 1 ಲಕ್ಷ ರೂ. ಒಳಗೆ ಶೇ.18, 5 ಲಕ್ಷ ರೂ. ಒಳಗಿನ ಕಾರಿಗೆ ಶೇ.13, 5 ಲಕ್ಷ ರೂ. ಮೇಲಿನ ಕಾರಿಗೆ ಶೇ.14, 10 ಲಕ್ಷ ರೂ. ಮೇಲಿನ ಕಾರಿಗೆ ಶೇ.17, 20 ಲಕ್ಷ ರೂ.ಗೂ ಮೇಲ್ಪಟ್ಟ ಕಾರು ಹಾಗೂ ಇತರ ವಾಹನಗಳಿಗೆ ಶೇ.18 ತೆರಿಗೆ ವಿಧಿಸಲಾಗುತ್ತದೆ. ಎಲ್ಲ ಬಗೆಯ ವಾಹನಗಳಿಗೂ ಏಕರೂಪದಲ್ಲಿ ಆಯಾ ವಾಹನಗಳ ತೆರಿಗೆ ಮೇಲೆ ಶೇ.11 ಉಪಕರ (ಸೆಸ್‌) ವಿಧಿಸಲಾಗುತ್ತಿದೆ. 

ನಿಶ್ಚಿತ ಉಪತೆರಿಗೆ
ಈಗ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ 2017ರಂತೆ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ವಹಣೆಗಾಗಿ ನಿಧಿ ಸಂಗ್ರಹಿಸುವುದಕ್ಕಾಗಿ ನೋಂದಣಿ ಸಂದರ್ಭ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 500 ರೂ. ನಿಶ್ಚಿತ ಉಪತೆರಿಗೆ, ಇತರ ಎಲ್ಲ ವರ್ಗದ ವಾಹನಗಳಿಗೆ 1 ಸಾವಿರ ರೂ. ನಿಶ್ಚಿತ ಉಪ ತೆರಿಗೆ ವಸೂಲಿಗೆ ಮಾ.6ರಂದು ಆದೇಶ ಹೊರಡಿಸಿದ್ದು, ಮಾ.8ರಿಂದ ಜಾರಿಗೆ ಬಂದಿದೆ. ರಿಕ್ಷಾಗಳಿಗೆ ಈವರೆಗೆ ಜೀವಿತಾವಧಿ ತೆರಿಗೆ ಎಂದು 2,750 ರೂ. ಮಾತ್ರ ಸ್ವೀಕರಿಸಲಾಗುತ್ತಿತ್ತು. ಇನ್ನು ಮುಂದೆ ಅದಕ್ಕೂ 500 ರೂ. ಮೇಲ್‌ತೆರಿಗೆ ಅನ್ವಯವಾಗಲಿದೆ.

ಯಾಕಾಗಿ?
ರಸ್ತೆ ಸುರಕ್ಷತೆಗೆ ಸಂಬಂಧಿಸಿ ಪ್ರಾಧಿಕಾರದ ನಿರ್ವಹಣೆಗೆ ಈ ಉಪಸುಂಕ ವಸೂಲಿ ಮಾಡಲಾಗುತ್ತಿದೆ. ರಸ್ತೆ ಅಪಘಾತಗಳ ಸಂಖ್ಯೆ ತಗ್ಗಿಸುವುದು ಪ್ರಾಧಿಕಾರದ ಗುರಿ. ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ಅಪಘಾತ ತಾಣಗಳ ಕಪ್ಪುಪಟ್ಟಿಯನ್ನು ಗುರುತಿಸಿ ಅಪಘಾತರಹಿತ ವಲಯ ಆಗಿಸಲಾಗಿದೆ. ಇದನ್ನು ವಿಸ್ತರಿಸುವ ಯೋಜನೆ ಪ್ರಾಧಿಕಾರಕ್ಕಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರ ಕೂಡ ಅನುದಾನ ನೀಡುತ್ತದೆ. ಸಂಗ್ರಹಿತ ಮೊತ್ತದಲ್ಲಿ ಗಾಯಾಳುಗಳಿಗೆ ಸಹಾಯಧನ, ರಸ್ತೆ ಸುರಕ್ಷತೆ ಕುರಿತು ಸಂಶೋಧನೆ ನಡೆಸುವವರಿಗೆ ಉತ್ತೇಜನಧನ ನೀಡಲಾಗುವುದು. ಚಾಲನಾ ಪರವಾನಗಿ, ಸ್ಮಾರ್ಟ್‌ ಕಾರ್ಡ್‌ ನೀಡುವಾಗಲೂ ಸಂಗ್ರಹವಾಗುವ ಮೊತ್ತ ದೊಡ್ಡದೇ ಇದೆ. 

ಸಾಫ್ಟ್ವೇರ್‌ ಸಿದ್ಧವಾಗಿಲ್ಲ
ಆರ್‌ಟಿಒ ಸಾಫ್ಟ್ವೇರ್‌ನಲ್ಲಿ ಇನ್ನೂ ಈ ಸೆಸ್‌ ವಿಧಿಸಲು ಅವಕಾಶ ಮಾಡಿಕೊಟ್ಟಿಲ್ಲ. ಆದರೆ ತೆರಿಗೆ ಸ್ವೀಕರಿಸಲು ಸುತ್ತೋಲೆ ಬಂದಿದೆ. ಮಾ.14ರ ವೇಳೆಗೆ ತಂತ್ರಾಂಶ ಸಿದ್ಧಗೊಳ್ಳಲಿದೆ ಎನ್ನುತ್ತವೆ ಇಲಾಖಾ ಮೂಲಗಳು. ಅಲ್ಲಿಯ ವರೆಗೆ ಉಡುಪಿ ಸಹಿತ ಕೆಲವೆಡೆ “ವಿವಿಧ ಮೂಲಗಳಿಂದ ಬಂದ ಆದಾಯದ ಬಾಬ್ತು’ (ಮಿಸಲೇನಿಯಸ್‌) ಎಂದು ಸ್ವೀಕರಿಸಲಾಗುತ್ತಿದೆ. ಆದರೆ ತಂತ್ರಾಂಶ ಸಿದ್ಧವಾಗಿಲ್ಲ ಎಂದೇ ರಾಜ್ಯದ ಅನೇಕ ಕಡೆ ಉಪತೆರಿಗೆ ಪಡೆಯುತ್ತಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. 

Advertisement

ಸರಿಯಾಗಲಿದೆ
ತಂತ್ರಾಂಶ ಸಿದ್ಧಗೊಳ್ಳುತ್ತಿದ್ದು, ಮಾ.6ರಿಂದ ಆದೇಶ ಜಾರಿಗೆ ಬಂದಿದೆ. ಸರಕಾರೀ ಸುತ್ತೋಲೆಯಂತೆ ಈಗಾಗಲೇ ನೋಂದಣಿಯಾಗುತ್ತಿರುವ ವಾಹನಗಳಿಗೆ ಉಪಕರ ಪಡೆದುಕೊಳ್ಳಲಾಗುತ್ತಿದೆ.
– ರಮೇಶ್‌ ಎಂ. ವರ್ಣೇಕರ್‌ ಉಡುಪಿ ಉಪಸಾರಿಗೆ ಆಯುಕ್ತರು

ಹೆಚ್ಚಾಯಿತು ತೆರಿಗೆ
ಸಣ್ಣಪುಟ್ಟ ವಾಹನ ಕೊಳ್ಳುವವರಿಗೆ ಕರಭಾರ ಹೆಚ್ಚಾಗಿದೆ. ಏಕಾಏಕಿ ಮೊತ್ತ ನಿಗದಿಪಡಿಸಿದ ಕಾರಣ ದ್ವಿಚಕ್ರ ವಾಹನ ನೋಂದಣಿ ಮಾಡುವವರಿಗೆ ಹೊರೆಯಾಗಲಿದೆ. 
– ಸಂತೋಷ್‌ ಕುಮಾರ್‌ ಜೈನ್‌, ಮಹಾವೀರ ಚಾಲನಾ ತರಬೇತಿ ಸಂಸ್ಥೆ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next