Advertisement

ಜನರಿಗೆ ಸ್ಪಂದಿಸಲಾಗದಿದ್ರೆ ಜಾಗ ಖಾಲಿ ಮಾಡಿ

04:29 PM Jun 04, 2018 | |

ಮೊಳಕಾಲ್ಮೂರು: ಅಧಿಕಾರಿಗಳು ಜನರಿಗೆ ನ್ಯಾಯಯುತವಾಗಿ ಸಿಗುವ ಸೌಲಭ್ಯ ಕಲ್ಪಿಸಿದರೆ ಮಾತ್ರ ಅವರಿಗೆ ಸರ್ಕಾರಿ ಸಂಬಳ ಪಡೆಯಲು ಅವಕಾಶ ನೀಡುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗದಿದ್ದರೆ ಜಾಗ ಖಾಲಿ ಮಾಡಿಸುತ್ತೇನೆ ಎಂದು ಶಾಸಕ ಬಿ. ಶ್ರೀರಾಮುಲು ಗುಡುಗಿದರು. 

Advertisement

ಪಟ್ಟಣದ ಹಾನಗಲ್‌ ರಸ್ತೆಯ ಸ್ವಕುಳಸಾಳಿ ಗುರುಪೀಠದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಚುನಾವಣೆ ಇರುವುದರಿಂದ ಅಧಿಕಾರಿಗಳ ಸಭೆ ನಡೆಸಲು ಆಗಿಲ್ಲ. ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ. ಅಧಿಕಾರಿಗಳು ತಾವು ಪಡೆಯುವ ಸಂಬಳಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
 
ಮೊಳಕಾಲ್ಮೂರು ಪಟ್ಟಣಕ್ಕೆ ರಂಗಯ್ಯನದುರ್ಗ ಜಲಾಶಯದಿಂದ ಮಲಿನವಾದ ನೀರು ಪೂರೈಕೆಯಾಗುತ್ತಿರುವುದು ಅಚ್ಚರಿ ಮೂಡಿಸಿದೆ. ರಂಗಯ್ಯನದುರ್ಗ ಜಲಾಶಯದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದ್ದರೂ ನೀರನ್ನು ಶುದ್ಧೀಕರಿಸಿ ನೀಡಲು ಅಧಿಕಾರಿಗಳು ತಯಾರಿಲ್ಲ. ಈ ರೀತಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದರು.

ತಾಲೂಕಿನ ಜನರು ಭದ್ರಾ ಮೇಲ್ದಂಡೆ ಯೋಜನೆ ಮತ್ತು ತುಂಗಾ ಹಿನ್ನೀರು ಯೋಜನೆಯಿಂದ ವಂಚಿತರಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಇದುವರೆಗೆ ಜನಪ್ರತಿನಿಧಿಗಳು ಕುಡಿಯುವ ನೀರು ತರುತ್ತೇವೆಂದು ಹೇಳಿಕೆ ನೀಡಿದ್ದಾರೆಯೇ ವಿನಃ ಯಾರೂ ಈ ಬಗ್ಗೆ ಪ್ರಯತ್ನ ಮಾಡಿಲ್ಲ. ಆದರೆ ನಾನು
ಮಾತು ತಪ್ಪುವವನಲ್ಲ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಾಲಾ-ಕಾಲೇಜುಗಳು, ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಶ್ರಮಿಸಲಾಗುವುದು. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಯತ್ನಿಸುತ್ತೇನೆ. ನನ್ನ ಗೆಲುವು ಪ್ರತಿಯೊಬ್ಬ
ಮತದಾರರ ಗೆಲುವಾಗಿದೆ. ಅಭಿಮಾನ ಮತ್ತು ಪ್ರೀತಿಯಿಂದ ನೀಡಿದ ಗೆಲುವನ್ನು ಕ್ಷೇತ್ರದ ಜನತೆಗೆ ಸಮರ್ಪಣೆ ಮಾಡುತ್ತೇನೆ. ಕ್ಷೇತ್ರದ ಹಿರಿಯರು ಮತ್ತು ಅನುಭವಿಗಳು ಉತ್ತಮ ಸಲಹೆಗಳನ್ನು ನೀಡಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಸಮಾರಂಭದಲ್ಲಿ ಬಳ್ಳಾರಿಯ ಮಾಜಿ ಸಂಸದೆ ಜೆ. ಶಾಂತಾ, ಬಿಜೆಪಿ ರಾಜ್ಯ ಪರಿಷತ್‌ ಸದಸ್ಯ ಪಿ.ಇ. ವೆಂಕಟಸ್ವಾಮಿ, ಬಳ್ಳಾರಿಯ ಮುಖಂಡ ದಿವಾಕರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ್‌, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಈರಮ್ಮ, ಮಂಡಲಾಧ್ಯಕ್ಷರಾದ ಟಿ. ರೇವಣ್ಣ, ಎಂ.ವೈ.ಟಿ. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀರಾಮ ರೆಡ್ಡಿ, ಶಿವಣ್ಣ, ಮಾಜಿ ಅಧ್ಯಕ್ಷ ಡಿ.ಎಂ. ಈಶ್ವರಪ್ಪ, ಆರ್‌.ಜಿ. ಗಂಗಾಧರಪ್ಪ, ಸ್ವಕುಳಸಾಳಿ ಸಮಾಜದ ಗೌರವಾಧ್ಯಕ್ಷ ಸ್ವಾಮಿದೇವ ಗಾಯಕವಾಡ್‌, ಬಿಜೆಪಿ ಮುಖಂಡರಾದ ಪರಮೇಶ್ವರಪ್ಪ, ಮುನ್ನಾ ಭಾಯ್‌, ಸಂಜೀವಪ್ಪ, ಶಾಂತಾರಾಂ ಬಸಾಪತಿ, ಡಾ| ಮಂಜುನಾಥ, ಬಾಬು, ತಿಪ್ಪೇಸ್ವಾಮಿ, ಚಂದ್ರಶೇಖರ ಗೌಡ, ಟಿ.ಟಿ. ರವಿಕುಮಾರ್‌, ವಿನಯ್‌ಕುಮಾರ್‌, ಮೋಹನ ಕನಕ ಪಾಲ್ಗೊಂಡಿದ್ದರು.
 
ಚುನಾವಣೆಯ ನಂತರ ಶ್ರೀರಾಮುಲು ಅವರನ್ನು ಬಳ್ಳಾರಿಗೆ ಹುಡುಕಿಕೊಂಡು ಹೋಗಬೇಕೆಂದು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಆದರೆ ಮೊಳಕಾಲ್ಮೂರು ಕ್ಷೇತ್ರದ ಜನರು ಇದಕ್ಕೆ ಕಿವಿಗೊಡದೆ ನನ್ನನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆ ಆಶೀರ್ವದಿಸಿದರೆ ಅಭಿವೃದ್ಧಿ ಕಾರ್ಯ ಕೈಗೊಂಡು ಅಪಪ್ರಚಾರ ಮಾಡುವ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ.
ಬಿ. ಶ್ರೀರಾಮುಲು, ಮೊಳಕಾಲ್ಮೂರು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next