ಸಿಂಧನೂರು: ಎಲ್ಲ ರಂಗದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ನಗರಸಭೆ ಸಿಎಒ ದುರುಗಪ್ಪ ಹಸಮಕಲ್ ಹೇಳಿದರು.
ನಗರಸಭೆಯಲ್ಲಿ ನಲ್ಮ್ ಯೋಜನೆಯಡಿ ಸಾಮಾಜಿಕ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಪ್ರದೇಶ ಮಟ್ಟದ ಒಕ್ಕೂಟಗಳ ಪದಾಧಿಕಾರಿಗೆ ಹಾಗೂ ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುಂಪು ರಚನೆ ಮಾಡಿಕೊಂಡರೆ, ಸಾಕಷ್ಟು ಅನುಕೂಲವಾಗುತ್ತದೆ. ನಾಯಕತ್ವ ಗುಣ ಬೆಳೆಯುತ್ತದೆ. 10 ಜನರ ಮಹಿಳೆಯರು ಸೇರಿ ಗುಂಪು ರಚಿಸಿಕೊಳ್ಳಬೇಕು. 10 ಮಹಿಳಾ ಗುಂಪುಗಳು ಸೇರಿ ಪ್ರದೇಶ ಮಟ್ಟದ ಒಕ್ಕೂಟ ರಚಿಸಿಕೊಳ್ಳಬಹುದು. ಉಳಿತಾಯ ಗುಂಪುಗಳ ದಾಖಲಾತಿ ನಿರ್ವಹಣೆ ಹಾಗೂ ಉಳಿತಾಯ ಚಟುವಟಿಕೆ, ಆಂತರಿಕ ಸಾಲ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸರಕಾರದಿಂದ ಆವರ್ತ ನಿಧಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುನಿತಾ ಚನ್ನಾರೆಡ್ಡಿ ಮಾತನಾಡಿದರು. ಯುಎಲ್ ಡಿಪಿ ಸಂಪನ್ಮೂಲ ವ್ಯಕ್ತಿ ಗಿರಿಜಾರಾಮ್, ಜಿಲ್ಲಾ ಕೌಶಾಲಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ರಸೂಲ್ ಪಿಪಿಟಿ ಮೂಲಕ ತರಬೇತಿ ನೀಡಿದರು. ನಗರಸಭಾ ವ್ಯವಸ್ಥಾಪಕಿ ರೇಖಾ, ಸ್ಪಂದನಾ, ನಂದೀಶ್ವರ ಪ್ರದೇಶ ಮಟ್ಟ ಒಕ್ಕೂಟದ ಪದಾಧಿಕಾರಿಗಳು ಹಾಗೂ ಎಸ್‌ಎಚ್‌ಜಿ ಗುಂಪಿನ ಪ್ರತಿನಿಧಿಗಳು ಇದ್ದರು.