ಹುಣಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮಗಳಿಂದಾಗಿ ಮಹಿಳೆಯರಲ್ಲಿ ಸಬಲೀಕರಣವಾಗಿದೆ ಎಂದು ಯೋಜನೆಯ ತಾಲೂಕು ಯೋಜನಾಧಿಕಾರಿ ಯಶೋಧಾ ಶೆಟ್ಟಿ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಆಡಿಗನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ರಚಿತವಾಗಿರುವ ಪ್ರಕೃತಿ ಜ್ಞಾನ ವಿಕಾಸ ಕೇಂದ್ರದ ಎರಡನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ರಚಿಸಲ್ಪಟ್ಟಿರುವ ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಅನೇಕ ಕೌಶಲ್ಯಾಧಾರಿತ ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಇದರಿಂದ ಆರ್ಥಿಕ ಅಭಿವೃದ್ಧಿ ಹಾಗೂ ಮಹಿಳೆಯರಲ್ಲಿ ಧೈರ್ಯ, ನಾಯಕತ್ವ, ಆತ್ಮವಿಶ್ವಾಸ ಮೂಡುತ್ತದೆ.
ಇವುಗಳನ್ನು ಅಳವಡಿಸಿಕೊಂಡು ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕೆಂದು ಸಲಹೆ ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಣ ಉಳಿತಾಯದ ಜೊತೆಗೆ ಕೃಷಿ ಚಟುವಟಿಕೆ ಹಾಗೂ ಸ್ವಯಂ ಉದ್ಯೋಗಕ್ಕೂ ಪೂರಕವಾಗಿದೆ ಎಂದರು.
ತಾಲೂಕು ಜ್ಞಾನ ವಿಕಾಸ ಮೇಲ್ವಿಚಾರಕಿ ಗೀತಾ, ಜ್ಞಾನ ವಿಕಾಸ ಕಾರ್ಯಕ್ರಮಗಳಲ್ಲಿ ಕೌಟುಂಬಿಕ ಸಾಮರಸ್ಯ, ಶೌಚಾಲಯ ಬಳಕೆ, ಮಕ್ಕಳ ಶಿಕ್ಷಣ, ಬಾಲ್ಯವಿವಾಹ ತಡೆಗಟ್ಟುವಿಕೆ, ಪೌಷ್ಟಿಕ ಆಹಾರದ ಅವಶ್ಯಕತೆ, ಕಾನೂನು ಮಾಹಿತಿ, ಸರಕಾರದ ಯೋಜನೆಗಳು ಹಾಗೂ ಆರೋಗ್ಯ, ಪರಿಸರ, ಸ್ವತ್ಛತೆ ಕುರಿತು ಮೂಡಿಸಲಾಗುವುದು ಎಂದರು.
ವಾರ್ಷಿಕೋತ್ಸವ ಪ್ರಯುಕ್ತ ಸದಸ್ಯರಿಗೆ ವಿವಿಧ ಆಟೋಟ ಸ ರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಈ ವೇಳೆ ಶಿಕ್ಷಣ ಇಲಾಖೆ ಸಂಯೋಜಕ ಸೋಮಶೇಖರ್, ಸೇವಾಪ್ರತಿನಿಧಿ ಕುಮುದ, ಮುಖಂಡ ವೀರತಪ್ಪ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.