Advertisement

ಗ್ರಾಪಂಗಳಿಗೆ ಬಲ ತುಂಬಿದ್ದೇ ಕಾಂಗ್ರೆಸ್‌: ಲಾಡ್‌

05:46 PM Dec 01, 2021 | Team Udayavani |

ಕಲಘಟಗಿ: ಕಾಂಗ್ರೆಸ್‌ ಸರಕಾರ ಸದಾ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಲಿದ್ದು, ಪಂಚಾಯತ್‌ ರಾಜ್‌ ವ್ಯವಸ್ಥೆಯ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಬಲ ತುಂಬಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಅವರ ಪರ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ಕಾಂಗ್ರೆಸ್‌ ಸರಕಾರ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ದೊರಕುವಂತೆ ಮಾಡಿರುವುದರಿಂದಾಗಿ ಇಂದು ನೇರವಾಗಿ ದಿಲ್ಲಿಯಿಂದ ಗ್ರಾಪಂಗಳಿಗೆ ಅನುದಾನಗಳು ಹರಿದು ಬರುತ್ತಲಿವೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಾವೇ ಸ್ವತಃ ಕ್ರಿಯಾ ಯೋಜನೆಗಳನ್ನು ರಚಿಸಿ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಲು ಕಾಂಗ್ರೆಸ್‌ ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಇದರ ಪರಿಣಾಮವಾಗಿ ಉದ್ಯೋಗ ಖಾತ್ರಿ ಯೋಜನೆಯೂ ಸೇರಿದಂತೆ ಹಲವಾರು
ಯೋಜನೆಗಳು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿವೆ. ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಅವರನ್ನು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಬೇಕು ಎಂದರು.

ಅಭ್ಯರ್ಥಿ ಸಲೀಂ ಅಹ್ಮದ್‌ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಾದ್ಯಂತ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸಲು ಶ್ರಮಿಸುತ್ತೇನೆ. ಕಳೆದೆರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ತಾವು ಮಾಡಿರುವ ಪ್ರಾಮಾಣಿಕ ಸೇವಾ ಕಾರ್ಯಗಳೇ ತಮಗೆ ಶ್ರೀರಕ್ಷೆಯಾಗಿದ್ದು, ಪ್ರಜ್ಞಾವಂತ ಮತದಾರರಾದ ತಾವೆಲ್ಲರೂ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಶಾಸಕ ಶ್ರೀನಿವಾಸ ಮಾನೆ ಅವರು ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಕೃಷಿಕರ ಬದುಕು ದುಸ್ಥರವಾಗಿದ್ದು, ರಾಜ್ಯ ಸರಕಾರ ಪರಿಹಾರ ಹಾಗೂ ನೆರವು ನೀಡುವಲ್ಲಿ ವಿಫಲವಾಗಿದೆ.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಿರುವ ಮೋದಿಯವರ ಕೇಂದ್ರ ಸರಕಾರವು ಬಡ ಹಾಗೂ ಮಧ್ಯಮ ವರ್ಗದ ಜನರ ನೆಮ್ಮದಿಯ ಬದುಕನ್ನು ಕಸಿದುಕೊಂಡಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ಮತ ಕೇಳುವ ಹಕ್ಕನ್ನು ಬಿಜೆಪಿಯವರು ಕಳೆದುಕೊಂಡಂತಾಗಿದೆ ಎಂದು ಟೀಕಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ಐ.ಜಿ.ಸನದಿ, ಎಸ್‌.ಆರ್‌. ಪಾಟೀಲ, ಹನುಮಂತಪ್ಪ ಅಲ್ಕೊಡ, ಮಂಜುನಾಥಗೌಡ ಮುರಳ್ಳಿ, ಚಂದ್ರಶೇಖರ ಜುಟ್ಟಲ್‌, ಅಜಮತುಲ್ಲಾಖಾನ ಜಹಗಿರದಾರ, ಇಸ್ಮಾಯಿಲ್‌ ತಮಟಗಾರ, ಹರಿಶಂಕರ ಮಠದ, ರಾಮನಗೌಡ ಪಾಟೀಲ, ನರೇಶ ಮಲೆನಾಡು, ನಿಂಗಪ್ಪ ಬೆಳ್ಳಿವಾಲಿ, ದಾನಪ್ಪ ಕಬ್ಬೇರ, ಆನಂದ ಕಲಾಲ, ಸೋಮಶೇಖರ ಬೆನ್ನೂರ, ರಫೀಕ್‌ ಸುಂಕದ್‌, ಲಿಂಗರೆಡ್ಡಿ ನಡುವಿನಮನಿ, ಗಂಗಾಧರ ಚಿಕ್ಕಮಠ, ಬಾಬು ಅಂಚಟಗೇರಿ, ಬಾಳು ಖಾನಾಪುರ, ಹನುಮಂತ ಚವರಗುಡ್ಡ, ಬಾಬಾಜಾನ ತೇರಗಾಂವ್‌, ಭೋಜಪ್ಪ ಲಮಾಣಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next