ಬೆಳ್ತಂಗಡಿ: ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ನೆಲೆಯಲ್ಲಿ ಅಂಗವಿಕಲರನ್ನು ಸಮಾಜ ದಲ್ಲಿ ಸದೃಢ ಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೆನ್ನುಹುರಿ ಆಘಾತಕ್ಕೆ ಒಳಗಾದವರು ಸೇರಿದಂತೆ ಅಂಗವಿಕಲರ ಸಶಕ್ತೀಕರಣಕ್ಕೆ ಅತೀ ಹೆಚ್ಚು ವಾಹನ ವಿತರಿಸುವ ಮೂಲಕ ಕರ್ನಾಟಕದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸೇವಾ ಮನೋಭಾವ ತೋರಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ.ಜಿ.ಪಂ., ತಾ.ಪಂ. ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಎ.11ರಂದು ಸಂತೆ ಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನ ವಠಾರದಲ್ಲಿ ತಾಲೂಕಿನ 23 ಮಂದಿ ಅರ್ಹ ಅಂಗ ವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, 47ಮಂದಿ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹಸ್ತಾಂತರಿಸಿ ಮಾತನಾಡಿದರು.
ಬೆನ್ನುಹುರಿ ಅಘಾತಕ್ಕೆ ಒಳಗಾದವರ ಪುನಶ್ಚೇತನ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸೇವಾಧಾಮ ಎಂಬ ಸಂಸ್ಥೆ ನಿರಂತರ ಸೇವೆ ಒದಗಿಸುತ್ತಿದೆ. ಅದೇ ಸ್ಫೂರ್ತಿಯಿಂದ ಈವರೆಗೆ ತಾಲೂಕಿನಲ್ಲಿ 60ಕ್ಕೂ ಅಧಿಕ ತ್ರಿಚಕ್ರ ವಾಹನ ವಿತರಿಸ ಲಾಗಿದ್ದು ಫಲಾನುಭವಿಗಳ ಸಂತೋಷ ಕಂಡಾಗ ತೃಪ್ತಿ ಸಿಕ್ಕಿದೆ ಎಂದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ಪ.ಪಂ. ಸದಸ್ಯರಾದ ಶರತ್, ಪ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಲೋಕೇಶ್, ಹತ್ಯಡ್ಕ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ವರ್ತಕರ ಸಂಘದ ಕಾರ್ಯದರ್ಶಿ, ರೊನಾಲ್ಡ್ ಲೋಬೋ, ಸಿಡಿಪಿಒ ಪ್ರಿಯಾ ಆ್ಯಗ್ನೆಸ್, ಎಂಜಿನಿಯರಿಂಗ್ ಉಪವಿಭಾಗದ ಎಇ ಸೂರ್ಯ ನಾರಾಯಣ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಇಒ ಕುಸುಮಾಧರ್ ಬಿ.ಸ್ವಾಗತಿಸಿದರು.
ಶಕ್ತಿ ತುಂಬುವ ಕಾರ್ಯವಾಗಿದೆ
ಮುಖ್ಯ ಅತಿಥಿ ಕನ್ಯಾಡಿ ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಮಾತನಾಡಿ, ಬೆಳ್ತಂಗಡಿ ತಾಲೂಕು ಎಲ್ಲ ವರ್ಗದವರ ಏಳಿಗೆಗೆ ಆದ್ಯತೆ ನೀಡುತ್ತಿದೆ. ಶಾಸಕ ಹರೀಶ್ ಪೂಂಜ ಅವರ ಮಾದರಿ ಜನಪ್ರತಿನಿಧಿ ಸೇವೆಗೆ ಅಂಗವಿಕಲರ ಮೇಲಿನ ಕಾಳಜಿ ಸಾಕ್ಷಿಯಾಗಿದೆ. ಅಂಗವೈಕಲ್ಯದವರಿಗೆ ಶಕ್ತಿ ತುಂಬುವ ಕಾರ್ಯವಾಗಿದೆ ಎಂದರು.