ಚಿತ್ರದುರ್ಗ: ತಾಲೂಕಿನ ಗೋನೂರು ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ನಂದಿನಿದೇವಿ ಭೇಟಿ ನೀಡಿ ನರೇಗಾ ಯೋಜನೆಯಡಿ ‘ದುಡಿಯೋಣು ಬಾ’ ಅಭಿಯಾನದಡಿ ಕೈಗೊಂಡಿರುವ ಚಟುವಟಿಕೆಗಳನ್ನು ವೀಕ್ಷಿಸಿದರು. ಗ್ರಾಮದ ಜನಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಗ್ರಾಮದ ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ದುಡಿಯೋಣ ಬಾ ಯೋಜನೆ ಕುರಿತು ಜಾಗೃತಿ ಮೂಡಿಸಿದರು.
ನಂತರ ಘನತ್ಯಾಜ್ಯ ವಿಲೇವಾರಿ ಘಟಕ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲರಿಗೂ ಬೇಸಿಗೆಯಲ್ಲಿ ನಿರಂತರ ಉದ್ಯೋಗ ಕಲ್ಪಿಸಲು ಮಾರ್ಚ್ 15 ರಿಂದ ಜೂನ್ ಅಂತ್ಯದವರೆಗೂ ‘ದುಡಿಯೋಣ ಬಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ನಿರಂತರ ಉದ್ಯೋಗ ಒದಗಿಸುವುದು ಮತ್ತು ಅದರ ಮೂಲಕ ಗ್ರಾಮದ ನೈಸರ್ಗಿಕ ಜಲ ಸಂಪನ್ಮೂಲಗಳ ಅಭಿವೃದ್ಧಿ, ಹಸಿರೀಕರಣ ಮತ್ತು ಅರ್ಹ ಫಲಾನುಭವಿಗಳ ವೈಯಕ್ತಿಕ ಆಸ್ತಿಗಳನ್ನು ಸುಸ್ತಿರ ಮಾಡುವ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಉದ್ಯೋಗ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರು ಹೊಸದಾಗಿ ಸೇರ್ಪಡೆ, ಆಧಾರ್ ಅಥವಾ ಬ್ಯಾಂಕ್ ಖಾತೆ ನಂಬರ್ ತಿದ್ದುಪಡಿ ಅಥವಾ ಹೊಸ ಉದ್ಯೋಗ ಚೀಟಿ ಮತ್ತು ಬೇಸಿಗೆಯಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಬಹುದಾಗಿದೆ ಎಂದರು.
ಗೋನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಗೀತಾ, ಸದಸ್ಯರಾದ ಮಂಜುನಾಥ್, ಮಾಳಿಗೆ ಪಾಪಯ್ಯ, ಸಾಕಮ್ಮ, ಬಸವರಾಜ್, ಪಾಪಣ್ಣ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ, ಕಾಟಯ್ಯ, ರಾಘವೇಂದ್ರ, ಕಮಲಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಹನುಮಂತಪ್ಪ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಪಿ.ಟಿ. ಧನಂಜಯ, ಪಿಡಿಒ ಎಚ್.ಯರ್ರಿಸ್ವಾಮಿ ಮತ್ತಿತರರಿದ್ದರು.