ಉಡುಪಿ: ಯುವ ಜನತೆಗೆ ಸೂಕ್ತ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ವೃತ್ತಿ ಆಧಾರಿತ ಮತ್ತು ಬಿಪಿಒ ಸೇರಿದಂತೆ ಎಲ್ಲ ಉದ್ಯೋಗಗಳಿಗೆ ಸೂಕ್ತ ತರಬೇತಿ ನೀಡಿ ನೇಮಕಾತಿ ಒದಗಿಸುವ ಕೇಂದ್ರವನ್ನು ಖಾಸಗಿ ಸಂಸ್ಥೆ ಮ್ಯಾಂಡಮಸ್ ಎಜುಕೇಶನ್ ಅಕಾಡೆಮಿಯವರ ಸಹಯೋಗದಲ್ಲಿ 3 ತಿಂಗಳ ಒಳಗೆ ಉಡುಪಿಯಲ್ಲಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಗುರುವಾರ ಉಡುಪಿ ಜಿಲ್ಲಾ ಕ್ರೀಡಾಂಗಣದ ಬಳಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಾನವ ಸಂಪನ್ಮೂಲ ಅತ್ಯುತ್ತಮ ಮಟ್ಟದಲ್ಲಿದ್ದು, ಯುವಕರಿಗೆ ಸೂಕ್ತ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸಲು ಖಾಸಗಿ ಸಂಸ್ಥೆ ಮ್ಯಾಂಡಮಸ್ ಸಹಯೋಗದಲ್ಲಿ ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಿ, ಈ ಕೇಂದ್ರದಲ್ಲಿ ನೋಂದಾಯಿಸಿದ ಪ್ರತಿಯೊಬ್ಬರಿಗೂ ಸೂಕ್ತ ತರಬೇತಿ ಮತ್ತು ಉದ್ಯೋಗ ದೊರಕಿಸಲಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯನ್ನು ಇಡೀ ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಮ್ಯಾಂಡಮಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕಿಶನ್ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
– ಲಕ್ಷ ಮಂದಿಗೆ ಸರಕಾರಿ ನೇಮಕಾತಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಲೈನ್‌ಮನ್, ವೈದ್ಯರು, ಎಂಜಿನಿಯರ್, ಪ್ಯಾರಾಮೆಡಿಕಲ್, ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರ್ವೆಯರ್‌ಗಳು, ಪೊಲೀಸ್, ಶಿಕ್ಷಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿಗೊಳಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ಆಗದ್ದು ನಾಲ್ಕೇ ವರ್ಷಗಳಲ್ಲಿ ಮಾಡಲಾಗಿದೆ. ಯುವ ಜನತೆ ಸರಕಾರಿ, ಖಾಸಗಿ ಉದ್ಯೋಗಕ್ಕೆ ಕಾಯದೆ ಸೊÌàದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಎಂದು ಸಚಿವ ಪ್ರಮೋದ್ ಹೇಳಿದರು.
– 2,300 ನೋಂದಣಿ, 800 ಮಂದಿ ಆಯ್ಕೆ
ಉದ್ಯೋಗ ಮೇಳದಲ್ಲಿ 2,300 ಮಂದಿ ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ ಆಯ್ಕೆಯಾದ 800 ಮಂದಿಯ ಪಟ್ಟಿಯನ್ನು ತಯಾರಿಸಲಾಗಿದೆ. ಸುಮಾರು 70 ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು ಎಂದು ಸಂಘಟಕರು ಹೇಳಿದ್ದಾರೆ.