Advertisement

ವಿಜ್ಞಾನ ಕೇಂದ್ರಗಳಿಂದ ವಿದ್ಯಾವಂತರಿಗೆ ಉದ್ಯೋಗ ನೀಡಿ

02:38 PM Sep 16, 2017 | Team Udayavani |

ಚಿತ್ರದುರ್ಗ: ಜನಸ್ನೇಹಿ ಅಲ್ಲದ ಕನ್ನಡಿಯೊಳಗಿನ ಗಂಟಾಗಿರುವ ಡಿಆರ್‌ಡಿಒ, ಇಸ್ರೋ ಇತರೆ ವಿಜ್ಞಾನ ಕೇಂದ್ರಗಳಿಂದ ಬರ ಪೀಡಿತ, ಚಿತ್ರದುರ್ಗ ಜಿಲ್ಲೆಯ ವಿದ್ಯಾವಂತ ಯುವಕ-ಯುವತಿಯರಿಗೆ ಹೆಚ್ಚಿನ ಉದ್ಯೋಗ ನೀಡಿ ಜನಸ್ನೇಹಿ ವಿಜ್ಞಾನ ಕೇಂದ್ರವಾಗಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು. ಇಲ್ಲಿನ ಮಾದಾರಚನ್ನಯ್ಯ ಗುರುಪೀಠದಲ್ಲಿ ಶುಕ್ರವಾರ ಭಾರತ ಸರ್ಕಾರದ ಪ್ರಾಯೋಜಿತ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ವಿಜ್ಞಾನ ಕೇಂದ್ರಗಳಿಂದ ಏನು ಉಪಯೋಗ ಎನ್ನುವ ಪ್ರಶ್ನೆ ಕಾಡತೊಡಗಿದೆ. ಇದುವರೆಗೂ ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎನ್ನುವುದನ್ನು ಹೇಳಬೇಕು. 10 ಸಾವಿರಕ್ಕೂ ಹೆಚ್ಚಿನ ಭೂಮಿಯನ್ನು ಈ ಜಿಲ್ಲೆ ವಿಜ್ಞಾನ ಸಂಸ್ಥೆಗಳಿಗೆ ಕೊಡುಗೆ ನೀಡಿದೆ. ಇಂತಹ ಜಿಲ್ಲೆಗೆ ವಿಶೇಷವಾಗಿ ಏನಾದರೊಂದು ವಿಜ್ಞಾನ ಕೇಂದ್ರಗಳು ಕೊಡುಗೆ ನೀಡಬೇಕು. ಡಿಆರ್‌ಡಿಒ, ಇಸ್ರೋ ಇತರೆ ವಿಜ್ಞಾನ ಕೇಂದ್ರಗಳ ಕಾರ್ಯ ಚಟುವಟಿಕೆಗಳು ಬೇಗ ಪೂರ್ಣಗೊಂಡು ಹೆಚ್ಚಿನ ಉದ್ಯೋಗವನ್ನು ಜಿಲ್ಲೆಯ ನಿರುದ್ಯೋಗಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ತಾವು ಎಲ್ಲವನ್ನು ವಿರೋಧಿಸುವುದಿಲ್ಲ. ಪ್ರಧಾನಮಂತ್ರಿಗಳ ಕೌಶಲ್ಯ ಕೇಂದ್ರದ ಮೂಲಕ ನಿರುದ್ಯೋಗಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿರುದ್ಯೋಗಿಗಳು ಈ ಕೇಂದ್ರದಿಂದ ದೊರೆಯುವ ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸುವಂತೆ ಸಲಹೆ ನೀಡಿದರು.

3 ತಿಂಗಳ ಅವಧಿಗೆ 100 ನಿರುದ್ಯೋಗಿಗಳಿಗೆ ತರಬೇತಿ ನೀಡುವ ಅವಕಾಶವಿದೆ. ಆದರೆ 300 ಜನ ನಿರುದ್ಯೋಗಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ನಿರುದ್ಯೋಗದ ತೀವ್ರತೆ ಎಷ್ಟಿದೆ ಎನ್ನುವುದು ಇದರಿಂದ ತಿಳಿಯಲಿದೆ. ತರಬೇತಿ ನಂತರ ಪ್ರತಿಯೊಬ್ಬರಿಗೂ ಉದ್ಯೋಗ ದೊರಕಿಸಿಕೊಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಗಾಂಧೀಜಿ ಕಂಡು ಕನಸು ನನಸಾಗಬೇಕಾದರೆ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ, ದುಡಿಯುವ ಕೈಗಳಿಗೆ ತರಬೇತಿ ನಂತರ ಉದ್ಯೋಗ ನೀಡಬೇಕು. ಶ್ರದ್ಧೆಯಿಂದ ತರಬೇತಿ ಪಡೆದು ಕುಟುಂಬಕ್ಕೆ ಆಸರೆಯಾಗಬೇಕು ಎಂದು ಹೇಳಿದರು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್‌. ನವೀನ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಕೌಶಲ್ಯ ಕೇಂದ್ರ. ಈ ಕೇಂದ್ರದವರು ನೆಪ ಮಾತ್ರಕ್ಕೆ ತರಬೇತಿ ನೀಡಬಾರದು. ತರಬೇತಿಗೆ ಆಗಮಿಸುವವರು ಕೇವಲ ಪ್ರಮಾಣ ಪತ್ರಕ್ಕಾಗಿ ಬರಬಾರದು ಎಂದು ಎಚ್ಚರಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಉತ್ತಮ ಸಂಸ್ಕಾರವಂತರಾಗಬೇಕು. ಯುವಕರ ಮೇಲೆ ದೇಶ ಹೆಚ್ಚಿನ ಆಸೆ ಇಟ್ಟುಕೊಂಡಿದೆ. ದೇಶದ ಯುವಕರು ತಮಗಿಷ್ಟ ಇರುವ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯ ಹೊಂದಿ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂದು ಹೇಳಿದರು.

ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ತರಬೇತಿ ಕೇಂದ್ರದ ಮುಖ್ಯಸ್ಥ ಶ್ರೀಧರ್‌ ರಾವ್‌, ತರಬೇತಿ ಕೇಂದ್ರದ ಮುಖ್ಯಸ್ಥೆ ಅಲುವೇಲು ವೆಂಕಟೇಶ್‌, ಜಿಪಂ ಸದಸ್ಯ ನರಸಿಂಹರಾಜು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ
ಜಿ.ಟಿ. ರುದ್ರಣ್ಣಗೌಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next