ಆಳಂದ: ಉದ್ಯೋಗ ಖಾತ್ರಿ ಕಾಮಗಾರಿ ಸಮಪರ್ಕವಾಗಿ ಜಾರಿಗೊಳಿಸಬೇಕು. ಬರ ಪರಿಹಾರ ಕ್ರಮ ಕೈಗೊಳ್ಳುವುದು ಸೇರಿ ಪ್ರಮುಖ 10 ಬೇಡಿಕೆಗೆ ಒತ್ತಾಯಿಸಿ ಪ್ರಚಾರಾಂದೋಲನವನ್ನು ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿಯ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರಮುಖ ರಸ್ತೆಯ ಮೂಲಕ ಸಾಗಿ ತಾಪಂ ಕಚೇರಿ ಎದುರು ಪ್ರಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಕಾರ್ಯದರ್ಶಿ ಮೋಹನ ಎಂ. ಕಟ್ಟಿಮನಿ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿಯಿಂದ ಸಿದ್ಧಾರ್ಥ ಚೌಕ್ ಮೂಲಕ ತಾಪಂ ಕಚೇರಿ ವರೆಗೆ ಮೆರವಣಿಗೆ ಕೈಗೊಂಡು ಪ್ರತಿಭಟನೆ ಮೂಲಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಉಚಿತ ರೇಷನ್ ಮತ್ತು ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಜರುಗಿಸಬೇಕು. ಉದ್ಯೋಗ ಖಾತ್ರಿಯಲ್ಲಿ ಶ್ರಮಭಾರವನ್ನು ಶೇ. 50ರಷ್ಟು ಕಡಿತಮಾಡಬೇಕು. 100 ದಿನಗಳ ಬದಲು ಕುಟುಂಬವೊಂದಕ್ಕೆ 250 ದಿನಗಳ ಕೆಲಸ ಕೊಡಬೇಕು.
ದಿನಕ್ಕೆ 350 ರೂ. ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು. ಬರ ಪೀಡಿತ ಪ್ರದೇಶದ ರೈತ ಮತ್ತು ಕೃಷಿ ಕೂಲಿಕಾರರ ಸಾಲಮನ್ನಾ ಮಾಡಿ ಹೊಸ ಸಾಲ ನೀಡಬೇಕು. ಅಲ್ಲದೆ, ತಿಂಗಳಿಗೆ 3 ಸಾವಿರ ರೂ. ಪರಿಹಾರ ನೆರವು ನೀಡಬೇಕು. ಈ ಪ್ರದೇಶದ ಜನರ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಕೈಗೊಳ್ಳಬೇಕು.
ಶಿಕ್ಷಣ ಮತ್ತು ಪರೀûಾ ಶುಲ್ಕ ಮನ್ನಾಮಾಡಬೇಕು. ವಸೂಲಿ ಮಾಡಿದ ಶುಲ್ಕ ವಾಪಸ್ಸು ಕೊಡಬೇಕು. ಜಾನುವಾರುಗಳಿಗೆ ಬೇಕಾಗುವ ಮೇವು ಹಾಗೂ ಆಹಾರವನ್ನು ಉಚಿತವಾಗಿ ಒದಗಿಸಬೇಕು. ಪಡಿತರ ವ್ಯವಸ್ಥೆಯಲ್ಲಿ ಕೂಪನ್ ಪದ್ಧತಿ ಕೈಬಿಡಬೇಕು.
ಟಾರ್ಗೆಟ್ ಪದ್ಧತಿಯನ್ನು ಕೈಬಿಟ್ಟು ರೇಷನ್ ವ್ಯವಸ್ಥೆ ಸಾರ್ವತ್ರಿಕಗೊಳಿಸಿ ಎಲ್ಲ ಕೂಲಿಕಾರರಿಗೆ ಮತ್ತು ಬಡ ರೈತ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಅವರ ಮನೆಗಳಿಗೆ ತಲುಪಿಸಬೇಕು ಎಂದು ಆಗ್ರಹಿಸಿದರು. ಸ್ವಂತ ಮನೆಯಿಲ್ಲದ ಎಲ್ಲ ಕೂಲಿಕಾರರ ಮತ್ತು ಬಡ ರೈತ ಕುಟುಂಬಗಳಿಗೆ ಸರ್ಕಾರ ಉಚಿತವಾಗಿ ಮನೆ, ನಿವೇಶನ ಒದಗಿಸಿ ಮನೆ ಕಟ್ಟಲು ಅಗತ್ಯ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದದರು.
ಬೇಡಿಕೆಗಳ ಮನವಿಪತ್ರವನ್ನು ತಾಪಂ ಅಧಿಕಾರಿಗಳಿಗೆ ಸಲ್ಲಿಸಿದರು. ರಾಜ್ಯ ಸಮಿತಿ ಸದಸ್ಯೆ ಜಯಶ್ರೀ ಎಂ. ಕಟ್ಟಿಮನಿ, ಶ್ರೀಪತಿ ಹೊಡಲ್, ಸಾವಿತ್ರಿ ಎಲ್. ಹೊಡಲ್, ಬಾಬು ಮುರಡಿ, ಶರಣಮ್ಮ ಬೋಧನವಾಡಿ, ಮಾಯವ್ವ ಮಾದನ ಹಿಪ್ಪರಗಾ ಹಾಗೂ ಮತ್ತಿತರರು ಭಾಗವಹಿಸಿದ್ದರು.