Advertisement

ನಾಲೆ ನೀರು ಹರಿಯಲು ಕೈ ಹಿಡಿದ ನರೇಗಾ!

09:28 PM Mar 22, 2021 | Team Udayavani |

ಶಿವಮೊಗ್ಗ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಜನಸಾಮಾನ್ಯರು ಹೊಸ ಐಡಿಯಾಗಳೊಂದಿಗೆ ಬದುಕು ಕಟ್ಟಿಕೊಂಡರು. ಕೆಲವರು ಅದರಲ್ಲಿ ಯಶಸ್ವಿಯೂ ಆದರು. ಇಂತಹದ್ದೇ ಒಂದು ಪ್ರಯತ್ನದಲ್ಲಿ ಯಶ ಕಂಡ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಈಗ ರಾಜ್ಯಕ್ಕೆ ಮಾದರಿಯಾಗಿದೆ.

Advertisement

ಉದ್ಯೋಗ ಖಾತ್ರಿ ಸದ್ಬಳಕೆಗೆ ಪ್ರಾಧಿಕಾರ ಕೈಗೊಂಡ ನಿರ್ಧಾರದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳು ನಳನಳಿಸುತ್ತಿವೆ. ಬೇಸಿಗೆ ಬೆಳೆ ಅವ ಧಿಯಲ್ಲೂ ಯಾವುದೇ ಗಲಾಟೆ ಗದ್ದಲಗಳಿಲ್ಲದೆ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುತ್ತಿದೆ. ರೈತರು, ಕೂಲಿಕಾರರ ಸಂಜೀವಿನಿಯಾಗಿರುವ “ನರೇಗಾ’ ಈಗ ಅಚ್ಚುಕಟ್ಟು ಪ್ರದೇಶದ ರೈತರ ಕೈ ಹಿಡಿದಿದೆ.

ಕಾಲುವೆ ಹೂಳಿನಿಂದ ಗೋಳು:

ಭದ್ರಾ ಅಣೆಕಟ್ಟು ವ್ಯಾಪ್ತಿಯ ನಾಲೆಗಳು ಕಾಂಕ್ರೀಟೀಕರಣಗೊಂಡು ದಶಕಗಳೇ ಕಳೆದಿವೆ. ಹತ್ತು ವರ್ಷಗಳ ಹಿಂದಷ್ಟೇ ಕೆ.ಎಸ್‌. ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ 1200 ಕೋಟಿ ರೂ. ವಿನಿಯೋಗಿಸಿ ಎರಡೂ ನಾಲೆಗಳು ಮತ್ತು ಉಪ ನಾಲೆಗಳನ್ನು ಸಂಪೂರ್ಣ ಆಧುನೀಕರಣಗೊಳಿಸಿದರೂ ಹೂಳಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಅಚ್ಚುಕಟ್ಟು ಪ್ರದೇಶದ ಹೊಲಗಳಲ್ಲಿನ ಮಳೆ ನೀರು ನುಗ್ಗಿ ಕಾಲುವೆಗಳಲ್ಲಿ ಹೂಳು ತುಂಬಿ ತುಳುಕುತ್ತಿತ್ತು. ಉಪ ಕಾಲುವೆಗಳ ಪಾಡು ಇದಕ್ಕಿಂತ ಕಡೆಯಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಬೇಸಿಗೆ ಬೆಳೆಗೆ ನೀರು ಬಳಕೆ ಹೆಚ್ಚಾಗುವ ಕಾರಣ ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದರಿಂದ ಮೇಲಿನ ಭಾಗದ ರೈತರು, ಕೆಳಭಾಗದ ರೈತರ ನಡುವೆ ಜಗಳ ಸಾಮಾನ್ಯವಾಗಿರುತ್ತಿತ್ತು. ಕಾಲುವೆ ಹೂಳು ತೆಗೆಸುವಂತೆ ರೈತರಿಂದ ತೀವ್ರ ಒತ್ತಡ ಇತ್ತು.

ಮಳೆಗಾಲದ ಬೆಳೆ ನಂತರ ನೀರು ಸ್ಥಗಿತಗೊಳಿಸುವ ಅವ ಧಿಯಲ್ಲಿ ಹೂಳು ತೆಗೆಯುವುದು ವಾಡಿಕೆ. ಕೊರೊನಾ ಸಂಕಷ್ಟದಿಂದ ರಾಜ್ಯ ಸರ್ಕಾರದಿಂದ ಅನುದಾನ ಬರುವುದು ತಡವಾಗಿತ್ತು. ಆಗ ಹೊಳೆದಿದ್ದೆ “ನರೇಗಾ’.

Advertisement

 ನರೇಗಾದಡಿ ಕಾಲುವೆಗಳು ಲಕ..ಲಕ..:

ನಾಲೆಗಳಲ್ಲಿ ನ.20 ರಿಂದ ಡಿ.31ರವರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಹೂಳು ತೆಗೆಸಲು 425 ಕೋಟಿ ರೂ. ಅನುದಾನಕ್ಕಾಗಿ ಪ್ರಾಧಿಕಾರದಿಂದ ಸಿಎಂ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ನಿಗದಿತ ಅವ  ಧಿಯಲ್ಲಿ ಅನುದಾನ ದೊರಕಿರಲಿಲ್ಲ. ಆ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ನರೇಗಾ ಹಣ ಬಳಸಿಕೊಳ್ಳುವ ಆಲೋಚನೆ ಮಾಡಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಮನವೊಲಿಸಿ ಜಿಪಂ ಸಿಇಒ ಎಂ.ಎಲ್‌. ವೈಶಾಲಿ ಅವರನ್ನು ಸಂಪರ್ಕಿಸಿ ಉದ್ಯೋಗ ಖಾತ್ರಿ ಯೋಜನೆಯ ಉಪಯೋಗ ಪಡೆಯಲು ನಿರ್ಧರಿಸಿದರು.

ಎಲ್ಲರ ಸಹಕಾರದಿಂದ ಈಗ ಭದ್ರಾ ನಾಲೆಗಳ ಹೂಳು ಬಹುತೇಕ ಖಾಲಿಯಾಗಿದ್ದು ನೀರು ಅವ ಧಿಗೂ ಮುನ್ನವೇ ಕೊನೆ ಭಾಗಕ್ಕೆ ತಲುಪಿದೆ. ಬರೀ ಶಿವಮೊಗ್ಗದಲ್ಲಷ್ಟೇ ಅಲ್ಲದೇ ದಾವಣಗೆರೆ ಭಾಗದ ರೈತರು ಅವ ಧಿಗೆ ಮುನ್ನವೇ ನೀರು ಕಂಡು ಹರ್ಷಚಕಿತರಾಗಿ ಮೆಕ್ಕೆಜೋಳದ ಬದಲು ಈ ಬಾರಿ ಭತ್ತ ಬೆಳೆದಿದ್ದಾರೆ.

ಶ‌ರತ್‌ ಭದ್ರಾವತಿ 

Advertisement

Udayavani is now on Telegram. Click here to join our channel and stay updated with the latest news.

Next