Advertisement

ಉದ್ಯೋಗ ಖಾತ್ರಿ: ನಾಲ್ಕೂರು ಗ್ರಾ.ಪಂ. ಜಿಲ್ಲೆಗೆ ಪ್ರಥಮ

06:12 PM Jan 26, 2022 | Team Udayavani |

ಬ್ರಹ್ಮಾವರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ 2021-22ನೇ ಸಾಲಿನಲ್ಲಿ ನಾಲ್ಕೂರು ಗ್ರಾ.ಪಂ. ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸುವುದರೊಂದಿಗೆ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ ನಾಲ್ಕೂರು ಗ್ರಾ.ಪಂ.ಗೆ 18,260 ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಈಗಾಗಲೇ 18,515 ಮಾನವ ದಿನಗಳನ್ನು ಸೃಜನೆ ಮಾಡುವುದರೊಂದಿಗೆ ಪಂಚಾಯತ್‌ ಗುರಿ ದಾಟಿದೆ. 50 ಲ.ರೂ. ಕಾಮಗಾರಿ ಪೂರೈಸಿದೆ.

Advertisement

ಸಮಗ್ರ ಅಭಿವೃದ್ಧಿ
ಪಂಚಾಯತ್‌ನಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಾಗಿ 33 ಕೃಷಿ ಬಾವಿ, 12 ಗೊಬ್ಬರ ಗುಂಡಿ, ಎರೆಹುಳು ಗೊಬ್ಬರ ತೊಟ್ಟಿ, ದನದ ಹಟ್ಟಿ, ಬಚ್ಚಲುಗುಂಡಿ, ಕೋಳಿಗೂಡು ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಮುದಾಯ ಕಾಮಗಾರಿಗಳಾದ ಕೆರೆ ಹಾಗೂ ತೋಡುಗಳನ್ನು ಹೂಳೆತ್ತುವ ಕಾರ್ಯ ನಡೆದಿವೆ.

ಮುಚ್ಚಿ ಹೋಗಿದ್ದ ಕೆರೆಗೆ ಮರು ಜೀವ
ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮುದಾಯ ಕೆರೆ ಹೂಳೆತ್ತುವ ಕಾಮಗಾರಿ ಯಶಸ್ವಿಯಾಗಿ ಅನುಷ್ಠಾನ ಗೊಂಡಿದ್ದು, ಸಂಪೂರ್ಣ ಬತ್ತಿ ಹೋಗಿದ್ದ ಬಾಳೆಗುಂಡಿ ಆಚಾರಡಿ ಕೆರೆಗೆ ಮರುಜೀವ ನೀಡಲಾಗಿದೆ. ನರೇಗಾ ಅಡಿ ದುರಸ್ತಿಗೊಳಿಸಿ ಹೂಳೆತ್ತಲಾಗಿದ್ದು ಜೀವಸೆಲೆ ಬಂದಿದೆ.

ಈ ಕಾಮಗಾರಿಗಾಗಿ 2,74,482 ರೂ. ವೆಚ್ಚವಾಗಿದ್ದು 918 ಮಾನವ ದಿನಗಳನ್ನು ಸೃಜಿಸಲಾಗಿದೆ. ಹೂಳೆತ್ತುವ ಮುನ್ನ ಕೆರೆ ಸಂಪೂರ್ಣ ಮುಚ್ಚಿ ಹೋಗಿತ್ತು. ಕೆರೆಯ ಸುತ್ತಲೂ ಕಲ್ಲುಗಳನ್ನು ಜೋಡಿಸಿ ಕುಸಿಯದಂತೆ ದುರಸ್ತಿ ಮಾಡಲಾಗಿದೆ. ಕಳೆದ ಮಳೆಗೆ ಕೆರೆ ತುಂಬಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗಿದೆ. ಗ್ರಾಮಸ್ಥರಿಗೆ ನೀರಿನ ಆಸರೆಯಾಗಿದೆ.

ತೋಟಗಾರಿಕೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೂ ಫಲಾನುಭವಿಗಳಿಂದ ಬಹಳಷ್ಟು ಬೇಡಿಕೆಯಿದೆ. ಯೋಜನೆಯಡಿ ಗೊಬ್ಬರ ಗುಂಡಿ ಹಾಗೂ ಎರೆಹುಳು ಗೊಬ್ಬರ ತೊಟ್ಟಿ ರಚನೆಯಿಂದ ಕೃಷಿಗೆ
ಉತ್ತಮ ಗೊಬ್ಬರ ಲಭ್ಯವಾಗುತ್ತಿದೆ. ನರೇಗಾ
ಯೋಜನೆ ಗ್ರಾಮೀಣ ಜನರಿಗೆ ವರದಾನವೆಂದರೂ ತಪ್ಪಾಗದು.

Advertisement

ಬಹೂಪಯೋಗಿ ಯೋಜನೆ
ನಾಲ್ಕೂರು ಪಂಚಾಯತ್‌ನಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, ನರೇಗಾ ಯೋಜನೆಯಡಿ ಉದ್ಯೋಗ ಸೃಜನೆಗೆ ಒತ್ತು ನೀಡಲಾಗಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಮನೆಗಳಲ್ಲಿ ಬಾವಿ ನಿರ್ಮಾಣ ಕಾಮಗಾರಿಗಳ ಮೂಲಕ ನೀರಿನಕೊರತೆ ನೀಗಿಸಲಾಗುತ್ತಿದೆ. ಪಂಚಾಯತ್‌ನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನರೇಗಾ ಸಹಕಾರಿಯಾಗಿದೆ ಎಂದು ನಾಲ್ಕೂರು ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿ ಸೀತಾರಾಮ್‌ ಅವರು ತಿಳಿಸಿದ್ದಾರೆ.

ಸದುಪಯೋಗಪಡಿಸಿಕೊಳ್ಳಿ
ಬ್ರಹ್ಮಾವರ ತಾಲೂಕಿನ ನಾಲ್ಕೂರು, ಬಿಲ್ಲಾಡಿ, ಆವರ್ಸೆ ಗ್ರಾ.ಪಂ.ಗಳು ನರೇಗಾ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿವೆ. ವೈಯಕ್ತಿಕ ಕಾರ್ಯಗಳಿಗೆ ಅವಕಾಶವಿರುವುದರಿಂದ ಎಲ್ಲ ಪಂಚಾಯತ್‌ ಗಳಲ್ಲಿ ಜನರು ಇನ್ನಷ್ಟು ಮಾಹಿತಿ ಪಡೆದು ಈ ಅತ್ಯುತ್ತಮ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
-ನಂದಕಿಶೋರ್‌,
ನರೇಗಾ ತಾಂತ್ರಿಕ ಸಹಾಯಕ ಅಭಿಯಂತರರು

ಎಲ್ಲರಿಗೂ ಪ್ರಯೋಜನ
ಮದಗ, ಕೆರೆ ಅಭಿವೃದ್ಧಿಯಂತಹ ಸಾಮೂಹಿಕ ಕಾಮಗಾರಿಯಿಂದ ಆ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ನರೇಗಾದ ಅಡಿ ಹಲವಾರು ವೈಯಕ್ತಿಕ ಕಾಮಗಾರಿ ನಡೆಸಲು ಅವಕಾಶವಿರುವುದರಿಂದ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ.
-ಪ್ರಕಾಶ್‌ ನಾಯ್ಕ,
ಅಧ್ಯಕ್ಷರು, ನಾಲ್ಕೂರು ಗ್ರಾ.ಪಂ.

– ಪ್ರವೀಣ್‌ ಮುದ್ದೂರು

 

Advertisement

Udayavani is now on Telegram. Click here to join our channel and stay updated with the latest news.

Next