ಉಡುಪಿ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದ್ದು, 2020-21ರ ಸಾಲಿನಲ್ಲಿ ಸಾಧನೆ ತೋರಿದ ಗ್ರಾ.ಪಂ.ಗಳನ್ನು ಪುರಸ್ಕರಿಸಲಾಯಿತು.
ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹೊÉàತ್ ಸಮ್ಮುಖ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಸಾಧನೆ ತೋರಿದ ಗ್ರಾ.ಪಂ.ಗಳನ್ನು ಅಭಿನಂದಿಸಿದರು.
ಪ್ರಸಕ್ತ ಸಾಲಿನಲ್ಲಿ ಒಟ್ಟು 5.12 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಇರಿಸಲಾಗಿತ್ತು. ಜೂ.ಅಂತ್ಯಕ್ಕೆ 1.64 ಲಕ್ಷ ಗುರಿ ಹೊಂದಲಾಗಿತ್ತು, ಈವರೆಗೆ 2.88 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು ಗುರಿಗೆ ಶೇ.56.25 ಪ್ರಗತಿ ಸಾಧಿಸಿದ್ದು, ಶೇ.175.60 ಪ್ರಗತಿ ಸಾಧಿಸಲಾಗಿದೆ. ಜೂನ್ ಮಾಹೆಯವರೆಗೆ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ಬಿಲ್ಲಾಡಿ ಗ್ರಾ.ಪಂ. (11,111 ಮಾನವ ದಿನಗಳು), ಹಕ್ಲಾಡಿ ಗ್ರಾ.ಪಂ. (6,817 ಮಾನವ ದಿನಗಳು), ಕಾಡೂರು ಗ್ರಾ.ಪಂ. (6,035 ಮಾನವ ದಿನಗಳು), ಕಟ್ ಬೇಲ್ತೂರು ಗ್ರಾ.ಪಂ. (5,884 ಮಾನವ ದಿನಗಳು), ಕೋಟ ಗ್ರಾ.ಪಂ. (5,135 ಮಾನವ ದಿನಗಳು),ಕಂದಾವರ ಗ್ರಾ.ಪಂ. (5,059 ಮಾನವ ದಿನಗಳು) ಹಾಗೂ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ತಾಂತ್ರಿಕ ಸಾಹಕ ಅಭಿಯಂತರ ಓಂಪ್ರಕಾಶ್ ( 48,063 ಮಾನವ ದಿನಗಳು), ಶ್ರೀಜಿತ್ (38,318 ಮಾನವ ದಿನಗಳು), ಲೋಕೇಶ್ (31,022 ಮಾನವ ದಿನಗಳು) ಅವರನ್ನು ಅಭಿನಂದಿಸಲಾಯಿತು.
ತ್ಯಾಜ್ಯ ನಿರ್ವಹಣೆ; ಕಿರುಚಿತ್ರ ಸ್ಪರ್ಧೆ: ಬಹುಮಾನ ವಿತರಣೆ
ಉಡುಪಿ ಜಿ.ಪಂ.ವತಿಯಿಂದ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಅರಿವು ಮೂಡಿಸಲು “ನನ್ನ ಕಸ ನನ್ನ ಜವಾಬ್ದಾರಿ’ ಎಂಬ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿ.ಪಂ.ಅಧ್ಯಕ್ಷ ದಿನಕರ ಬಾಬು ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನ ಪಡೆದ ಅಲ್ ರೆಂಜಾಳ ಅವರಿಗೆ 10 ಸಾವಿರ ರೂ., ದ್ವಿತೀಯ ಬಹುಮಾನ ಪಡೆದ ಭಾಸ್ಕರ್ ಮಣಿಪಾಲ ಅವರಿಗೆ 7ಸಾವಿರ ರೂ., ತೃತೀಯ ಬಹುಮಾನ ಪಡೆದ ಸತ್ಯೇಂದ್ರ ಪೈ ಅವರಿಗೆ 3 ಸಾವಿರ ರೂ.ಗಳ ಬಹುಮಾನ ವಿತರಿಸಲಾಯಿತು.