Advertisement

ಉದ್ಯೋಗ ಸೃಷ್ಟಿ-ಜನರಿಗೆ ಲೆಕ್ಕ ಕೊಡಿ: ಸಂಸದ ಖರ್ಗೆ

12:58 PM Mar 14, 2019 | Team Udayavani |

ಚಿತ್ತಾಪುರ: ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಹೀಗಾದಲ್ಲಿ ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಹಾಗಾದರೆ ನೀವು ಐದು ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎನ್ನುವ ಕುರಿತು ಜನರಿಗೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಜಯದೇವ ಹಾಗೂ ಕಿದ್ವಾಯಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಂಡಿದ್ದ ಬೃಹತ್‌ ಜಿಲ್ಲಾ ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಸಮೀಕ್ಷೆ ಪ್ರಕಾರ ಇಲ್ಲಿಯ ವರೆಗೆ ಕೇವಲ 27 ಲಕ್ಷ ಮಾತ್ರ ಉದ್ಯೋಗ ಸೃಷ್ಟಿಯಾಗಿದ್ದು, 38 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನುವ ಸತ್ಯ ಹೊರ ಬಿದ್ದಿದೆ. ಕೇವಲ ಸುಳ್ಳು ಹೇಳಿ ಅಧಿಕಾರ ಪಡೆದುಕೊಂಡಿರುವ ಇವರು ನಿರುದ್ಯೋಗಿಗಳಿಗೆ ಪಕೋಡಾ ಮಾರಲು ಹಚ್ಚುತ್ತಾರೆಯೇ ವಿನಃಉದ್ಯೋಗ ನೀಡೋದಿಲ್ಲ ಎಂದರು.

ರಾಷ್ಟ್ರೀಯ ಗ್ರಾಮೀಣ ಅಭಿಯಾನ 2005 ರಲ್ಲಿ ಜಾರಿಗೆ ಬಂದಿದೆ. ಇದೀಗ ಆಯುಷ್ಮಾನ ಭಾರತ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಆಯುಷ್ಮಾನ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಶೇ. 60 ರಷ್ಟು ಹಣ ಮೀಸಲಿಟ್ಟಿದ್ದರೇ, ರಾಜ್ಯ ಸರ್ಕಾರ 40 ರಷ್ಟು ಹಣವನ್ನು ಬರಿಸಬೇಕಾಗುತ್ತದೆ. 

ಇದರ ಅರ್ಥ ಈ ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ಆರೋಗ್ಯ ಚಿಕಿತ್ಸೆಗಾಗಿ ಕೇವಲ 5 ಲಕ್ಷ ರೂ. ಮಾತ್ರ ದೊರೆಯುತ್ತದೆ. ಆದರೆ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಯ ಚಿಕಿತ್ಸೆಗಾಗಿ ಸಂಪೂರ್ಣ ವೆಚ್ಚ ಬರಿಸಲು 1960 ಕೋಟಿ ರೂ. ಬಿಡುಗಡೆ ಮಾಡುತ್ತದೆ. ಆದರೆ ಕೇಂದ್ರ ಸರ್ಕಾರ 6600 ಕೋಟಿ ರೂ. ಗಳನ್ನು ದೇಶದ 30 ರಾಜ್ಯಗಳಿಗೆ ನೀಡುತ್ತದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಯೋಜನೆಗಳು ಮೊಸಳೆ ಕಣ್ಣಿರು ಒರೆಸುವ ತಂತ್ರವಾಗಿವೆ ಎಂದು ಲೇವಡಿ ಮಾಡಿದರು.

Advertisement

ಕೇಂದ್ರ ಸರ್ಕಾರ ದೇಶದ ಜನರ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಕಾಂಗ್ರೆಸ್‌ ಸರ್ಕಾರ ಜನರ ಏಳಿಗೆಗಾಗಿ ತಂದಿರುವ ಯೋಜನೆಗಳನ್ನೇ ಬಳಸಿಕೊಂಡು, ನಾವು ಇಟ್ಟಿರುವ ಹೆಸರುಗಳನ್ನು ತೆಗೆದು ಹಾಕಿ ಬೇರೊಂದು ಹೆಸರುಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ ಎಂದರು.
 
ಜಿಡಿಪಿ ಗ್ರೂಪ್‌ನಲ್ಲಿ ದೇಶದ ಆರ್ಥಿಕತೆಯನ್ನು ಶೇ. 8ರಷ್ಟು ಹೆಚ್ಚಳ ಮಾಡುತ್ತೇವೆ ಎಂದು ವಾಗ್ಧಾನ ಮಾಡಿದ್ದರು. ಆದರೆ ಇದೀಗ ಬಂದ ವರದಿ ಪ್ರಕಾರ ಕೇವಲ ಶೇ. 6.6 ಜಿಡಿಪಿ ಗ್ರೋಥ್‌ ಆಗಿದೆ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ನಾವು ದಿನೇ ದಿನೇ ಆರ್ಥಿಕವಾಗಿ ಹಿಂದುಳಿಯಲು ಮೋದಿ ಅವರೇ ನೇರ ಕಾರಣರಾಗಿದ್ದಾರೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆ ತೊಗರಿ ಕಣಜ ಎಂದೇ ಪ್ರಖ್ಯಾತಿ ಪಡೆದಿದೆ. ದರೆ ಇಲ್ಲಿ ಎಂಎಸ್‌ಪಿ ದರದಲ್ಲಿ ವ್ಯತ್ಯಾಸವಾಗಿದೆ. ಉದ್ದು, ಹೆಸರಿಗೆ ಎಂಎಸ್‌ಪಿ ದರ ಅಧಿಕವಾಗಿದೆ. ಹೀಗಾಗಿ ಈ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ಅನೇಕ ರೈತ ಕುಟುಂಬಗಳು ಬೀದಿ ಪಾಲಾಗುವುದಕ್ಕೆ ಮೋದಿಯೇ ನೇರ ಹೋಣೆಗಾರರು ಎಂದು ಆಪಾದಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಎಂ.ಕೆ. ಪಾಟೀಲ, ಜಿಪಂ ಸಿಇಒ ಎ.ರಾಜಾ, ಓಂ ಪ್ರಕಾಶ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಮೂದ್‌
ಸಾಹೇಬ, ಶಹಬಾದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿಗೌಡ, ಸದಸ್ಯ ಮನಸೂರ್‌ ಪಟೇಲ್‌ ಹಾಗೂ ಮುಖಂಡರು ಇದ್ದರು.

ಮೌಲಾನಾ ಆಜಾದ್‌ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತಾಲೂಕು ಆರೋಗ್ಯಾಧಿಕಾರಿ ಸುರೇಶ ಮೇಕಿನ್‌ ಸ್ವಾಗತಿಸಿದರು. ವಿನಾಯಕ್‌ ಜೋಷಿ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next