ಬೆಂಗಳೂರು: ಉದ್ಯೋಗ ಮೇಳಗಳು ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳ ಜೀವನ ಸುಭದ್ರ ಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಅಹಮದ್ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿದರು.
“ಉದ್ಯೋಗ ಮೇಳಗಳು ಮಾನವ ಸಂಪನ್ಮೂಲದ ಬಳಕೆಗೆ ಸೂಕ್ತ ವೇದಿಕೆ. ಲಕ್ಷಾಂತರ ವಿದ್ಯಾವಂತ ಯುವಕರು ಉನ್ನತ ವ್ಯಾಸಂಗ ಮಾಡಿ, ಕೌಶಲ್ಯ ತರಬೇತಿ ಪಡೆದು ಉದ್ಯೋಗ ಮಾಡಲು ಸಿದ್ಧರಿದ್ದಾರೆ. ಅವರ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸುವ ವೇದಿಕೆ ಸಿದ್ಧಪಡಿಸುವುದು ಮಹತ್ವದ ಕೆಲಸ. ಆ ನಿಟ್ಟಿನಲ್ಲಿ ಇಂತಹ ಕಾರ್ಯ ಶ್ಲಾಘನೀಯ,’ ಎಂದರು.
ಮಾಜಿ ಸಚಿವ ಜಮೀರ್ ಅಹಮದ್, “ನನ್ನ ಸೋದರನ ಪ್ರೇರಣೆಯಿಂದ ಇದೇ ಮೊದಲ ಬಾರಿಗೆ ಉದ್ಯೋಗ ಮೇಳ ಆಯೋಜಿಸಿದ್ದೇನೆ. ಇನ್ಮುಂದೆ ಪ್ರತಿವರ್ಷ ಆಯೋಜಿಸುತ್ತೇನೆ,’ ಎಂದು ಹೇಳಿದರು.
“ಸೌದಿ ಅರೇಬಿಯಾ, ನೆದರ್‌ಲ್ಯಾಂಡ್ ಸೇರಿ ಹೊರದೇಶ ಹಾಗೂ ನಮ್ಮ ರಾಜ್ಯದ 150 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ. ಸೌದಿ ಅರೇಬಿಯಾದಲ್ಲಿ ಕೆಲಸ ದೊರೆತರೆ ಏಜೆಂಟರಿಗೆ 75 ರಿಂದ 1 ಲಕ್ಷ ರೂ. ಕಮೀಷನ್ ನೀಡಬೇಕು. ಹೀಗಾಗಿಯೇ, ಇಲ್ಲಿಗೆ ಸೌದಿ ಅರೇಬಿಯಾದ ಕಂಪನಿಗಳನ್ನೂ ಕರೆಸಿದ್ದೇನೆ,’ ಎಂದರು.
ಇಂದಿನ ಉದ್ಯೋಗ ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದು 4902 ಅಭ್ಯರ್ಥಿಗಳು ಉದ್ಯೋಗ ಸಂಬಂಧ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ನಟ ಪ್ರಕಾಶ್ ರೈ ಅವರು ಸ್ವಯಂ ಪ್ರೇರಿತರಾಗಿ ಉದ್ಯೋಗ ಮೇಳಕ್ಕೆ ಬಂದು ಚಾಲನೆ ನೀಡಿದರು. ಕನ್ನಡಿಗರ ಮೇಲೆ ಅವರು ಇಟ್ಟಿರುವ ಪ್ರೀತಿಗೆ ಇದು ಸಾಕ್ಷಿ ಎಂದರು.