Advertisement

ಜಿಲ್ಲೆಗಳಲ್ಲಿ ಉದ್ಯೋಗಾಧಾರಿತ ತರಬೇತಿ ಕೇಂದ್ರ

10:58 AM Aug 06, 2020 | mahesh |

ಶಿಡ್ಲಘಟ್ಟ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ತರಬೇತಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಜವಳಿ, ಕೈಮಗ್ಗ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ
ಬಾಳಸಾಹೇಬ ಪಾಟೀಲ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿದರು. ರಾಜ್ಯದಲ್ಲಿ 1.25 ಲಕ್ಷ ನೇಕಾರರಿದ್ದು, ಇವರಿಗೆ ಮುಂದಿನ ದಿನಗಳಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿ
ಉದ್ಯೋಗ ಆಧಾರಿತ ಶಿಕ್ಷಣ ತರಬೇತಿ ಕೇಂದ್ರ
ತೆರೆದು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

7.81ಲಕ್ಷ ರೂ. ಅನುದಾನ: ನೇಕಾರ್‌ ಸಮ್ಮಾನ್‌ ಯೋಜನೆಯಡಿ ನೇಕಾರರಿಗೆ 2000 ಸಾವಿರ ರೂ. ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ರಾಜ್ಯಾದ್ಯಂತ 54 ಸಾವಿರ ಕೈಮಗ್ಗ ನೇಕಾರರಿದ್ದಾರೆ. ಇದರ ಪೈಕಿ 41 ಸಾವಿರ ಅರ್ಜಿಗಳು ಬಂದಿದ್ದು, 39
ಸಾವಿರ ಕೈಮಗ್ಗ ನೇಕಾರರಿಗೆ ಧನ ಸಹಾಯ ನೀಡಲು ರಾಜ್ಯ ಸರ್ಕಾರ 7.81ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ನೇಕಾರರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು
ಹೇಳಿದರು.ರಾಜ್ಯದಲ್ಲಿ 1.25 ಲಕ್ಷ ಪವರ್‌ ಲೂಮ್‌ ನೇಕಾರರಿದ್ದು, 47 ಸಾವಿರ ಅರ್ಜಿ ಗಳು ಬಂದಿವೆ. 42 ಸಾವಿರ ಜನರಿಗೆ ಒಬ್ಬರಿಗೆ 2000 ರೂ.ನಂತೆ 6.44 ಕೋಟಿ ರೂ. ಬಿಡುಗಡೆ ಮಾಡಿ ನೇಕಾರರ ಖಾತೆಗಳಿಗೆ ಜಮೆ
ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ 790 ಕೈಮಗ್ಗಗಳು, 1342 ವಿದ್ಯುತ್‌ ಕೈಮಗ್ಗಗಳು, 11 ಜವಳಿ ಘಟಕಗಳು, 12 ಕೈಮಗ್ಗ ಸಹಕಾರ ಸಂಘಗಳು, ಜವಳಿ ನೀತಿ ಅಡಿ 6 ತರಬೇತಿ ಕೇಂದ್ರಗಳಿವೆ ಹಾಗೂ ಜಿಲ್ಲೆಯ ವ್ಯಾಪ್ತಿಯಲ್ಲಿ 1000 ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿವೆ ಎಂದು
ಹೇಳಿದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್‌.ಲತಾ, ಕೈಮಗ್ಗ, ಜವಳಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್‌ ಸಿಂಗ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇ ಶಕ ಪಾಷಾ, ಜಿಪಂ ಸಿಇಒ ಬಿ.  ಫೌಜಿಯಾ ತರನ್ನುಮ್‌, ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಾಕಾಂತ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖಾಧಿಕಾರಿ ಶರೀಫ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next