Advertisement
ಪ್ರತಿಭಟನೆಗೆ ಮುಂಚಿತವಾಗಿ ವೆನ್ಲಾಕ್ ಆಸ್ಪತ್ರೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬಂದರು ಕಾರ್ಮಿಕರು ಮೆರವಣಿಗೆ ನಡೆಸಿದರು. ಎಐಸಿಸಿಟಿಯು ರಾಷ್ಟ್ರೀಯ ಅಧ್ಯಕ್ಷ ಶಂಕರ್ ಮಾತನಾಡಿ, ಜ. 29ರಂದು ಶಿಪಿಂಗ್ ಕಂಪೆನಿ ನೌಕರರ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.
ಸರಕಾರದ ಕಾರ್ಮಿಕ ಕಾನೂನು ಪ್ರಕಾರ ದುಡಿಮೆಯ ಅವಧಿ 8 ಗಂಟೆ. ಆದರೆ ಎನ್‌ಎಂಪಿಟಿಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನದ ಜತೆಗೆ ಹೆಚ್ಚುವರಿ ದುಡಿಮೆಗೆ ಹೆಚ್ಚುವರಿ ವೇತನ ಪಾವತಿಸಬೇಕಾಗಿದೆ. ಈ ಬಗ್ಗೆ ಎನ್‌ಎಂಪಿಟಿ ಅಧ್ಯಕ್ಷರ ಗಮನಕ್ಕೆ ತಂದಾಗ ಕಾರ್ಮಿಕ ಸಮಸ್ಯೆ ತನಗೆ ಸಂಬಂಧಿಸಿದ್ದಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ನಮಗೆ ಪ್ರತಿಭಟನೆ ನಡೆಸದೆ ಅನ್ಯ ಮಾರ್ಗವಿಲ್ಲ; ಆದ್ದರಿಂದ ಜ. 29ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ವಿವರಿಸಿದರು. ಬಂದರು ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳನ್ನು ಈಡೇರಿಸಬೇಕು. ಸಾರ್ವಜನಿಕರ ಸಹಾನುಭೂತಿ ಕೂಡ ಅಗತ್ಯ ಎಂದು ವಿದ್ಯಾ ದಿನಕರ್ ಹೇಳಿದರು. ಶಿಪಿಂಗ್ ಕಂಪೆನಿಗಳು ಕಾರ್ಮಿಕರನ್ನು ಶೋಷಿಸುತ್ತಿವೆ ಎಂದು ಆರೋಪಿಸಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ಸವಲತ್ತು ಒದಗಿಸುತ್ತಿಲ್ಲನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಯು ಕಾರ್ಮಿಕ ಕಾನೂನುಗಳನ್ನು ಅನುಸರಿಸುತ್ತಿಲ್ಲ ಹಾಗೂ ಕಾರ್ಮಿಕರಿಗೆ ಯಾವುದೇ ಸವಲತ್ತುಗಳನ್ನು ಒದಗಿಸುತ್ತಿಲ್ಲ. ದುಡಿಮೆಗೆ ಕಾಲ ಮಿತಿಯೇ ಇಲ್ಲ ಎಂಬಂತೆ ದಿನಕ್ಕೆ 12ರಿಂದ 24 ಗಂಟೆ ಕಾಲವೂ ದುಡಿಸುತ್ತಿದೆ. ಕಾನೂನು ಪ್ರಕಾರ ನೀಡ ಬೇಕಾದ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ನೀಡುತ್ತಿಲ್ಲ. ಎನ್‌ಎಂಪಿಟಿ ಕೇಂದ್ರ ಸರಕಾರದ ಅಧೀನಕ್ಕೆ ಬರುತ್ತಿರುವುದರಿಂದ ಅದು ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಐಸಿಸಿಟಿಯು ರಾಷ್ಟ್ರೀಯ ಅಧ್ಯಕ್ಷ ಶಂಕರ್ ಒತ್ತಾಯಿಸಿದರು.