ಕೊಪ್ಪಳ: ಗ್ರಾಪಂ ನೌಕರರಿಗೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಮಟ್ಟದ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಗ್ರಾಪಂ ನೌಕರರು ಬಸವೇಶ್ವರ ವೃತ್ತದ ಮಾರ್ಗವಾಗಿ ವಾಹನದಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಮಟ್ಟದ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ನೌಕರರಿಗೆ ಕನಿಷ್ಟ ವೇತನ ನೀಡುವಂತೆ ಆದೇಶವಿದ್ದರೂ ಸರ್ಕಾರ ಕನಿಷ್ಟ ವೇತನ ನೀಡುತ್ತಿಲ್ಲ. ಜೊತೆಗೆ ಜಿಪಂ ಹಂತದಲ್ಲಿಯೇ ಬಡ್ತಿಗೆ ಅನುಮೋದನೆ ನೀಡುವ ಆದೇಶವಿದ್ದರೂ ಸಹ ಬಡ್ತಿ ನೀಡುವ ಕೆಲಸ ಮಾಡುತ್ತಿಲ್ಲ. ಅಲ್ಲದೇ, ಕರವಸೂಲಿಗಾರ, ಕ್ಲರ್ಕ್, ಗಣಕಯಂತ್ರ ಸಹಾಯಕರನ್ನು, ನೀರಗಂಟಿ, ಜವಾನರನ್ನು ನೌಕರರನ್ನಾಗಿ ಪರಿಗಣಿಸಬೇಕು. ಸೇವಾ ನಿಯಮಗಳನ್ನು ರಚಿಸಿ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಗ್ರಾಪಂ ನೌಕರರನ್ನು ಎಎಫ್‌ಎಂಸ್‌ನಲ್ಲಿ ಸೇರಿಸಿ ಪ್ರತಿ ತಿಂಗಳು ವೇತನ ನೀಡಬೇಕು. ಸರ್ಕಾರ ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಬಾಕಿ ಉಳಿದ ಕ್ಲರ್ಕ್ ಸೇರಿ ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರಗಂಟಿ, ಸಿಪಾಯಿ, ಸ್ವಚ್ಛತಾಗಾರರಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಬೇಕು. ಜೇಷ್ಠತಾ ಪಟ್ಟಿಯನ್ನು ಪರಿಗಣಿಸಬೇಕು. ಕರವಸೂಲಿಗಾರರಿಗೆ ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ನೀಡಬೇಕು. ಎಲ್ಲ ಗ್ರಾಪಂ ನೌಕರರಿಗೆ ಬಾಕಿ ವೇತನ ಪಾವತಿಸುವಂತೆ ಆದೇಶ ಮಾಡಬೇಕು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಕ್ರಮ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದಂತೆ ಆದೇಶ ಹೊರಡಿಸಬೇಕು. ಅಕ್ರಮ ನೇಮಕಾತಿಗೆ ಕಾರಣರಾದ ಪಿಡಿಒ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು.
ಗ್ರಾಪಂ ಸಿಬ್ಬಂದಿ ನಿವೃತ್ತಿ ಹೊಂದಿದವರಿಗೆ ನಿವೃತ್ತಿ ವೇತನ ನೀಡುವಂತೆ ಆದೇಶ ಹೊರಡಿಸಬೇಕು. ಗ್ರಾಪಂ ಸಿಬ್ಬಂದಿ ಸೇವೆಯಲ್ಲೇ ಮರಣ ಹೊಂದಿದರೆ, ಆ ಕುಟುಂಬದಲ್ಲಿ ಒಬ್ಬರಿಗೆ ಗ್ರಾಪಂನಲ್ಲಿ ಕೆಲಸ ಕೊಡಬೇಕು. ಬಳಗೇರಿ, ಬೆನಕನಾಳ ಗ್ರಾಪಂನಲ್ಲಿ ಕೆಲಸ ನಿರ್ವಹಿಸುವ ಶರಣಮ್ಮ, ಮಹ್ಮದ್ ಜಿಲಾನಿ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು, ಅವರನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಗ್ರಾಪಂ ಸಿಬ್ಬಂದಿ ವೇತನ ರಜಿಸ್ಟರ್ ಗಮನಿಸಿ ವೇತನ ನೀಡದೇ ಇರುವ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಗ್ರಾಪಂ ಸಿಬ್ಬಂದಿಗೆ ಅನಾವಶ್ಯಕ ತೊಂದರೆ ನೀಡಿ ಕೆಲಸದಿಂದ ತೆಗೆದು ಹಾಕುವುದನ್ನು ನಿಲ್ಲಿಸಬೇಕು. ಎಲ್ಲ ಸಿಬ್ಬಂದಿಗಳ ಸೇವಾ ಪುಸ್ತಕ ಬರೆಸಬೇಕೆಂದು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ವೇಳೆ ಸಂಘಟನೆ ಮುಖಂಡರಾದ ಎಂ.ಬಿ. ನಾಡಗೌಡ, ಎಸ್.ಡಿ. ಬಡಿಗೇರ, ಈರಪ್ಪ, ಅಮರೇಶ, ಗುರಪ್ಪ, ಶರಣಪ್ಪ ಬಂಡಿ, ಕೊಟ್ರೇಶ, ಪ್ರಕಾಶ, ಮದ್ದಾನೆಪ್ಪ, ರಮೇಶ ಕಬ್ಬರಗಿ.