ಮೈಸೂರು: ಕೇಂದ್ರ ಸರ್ಕಾರ ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಂಗಳವಾರ ಹುಣಸೂರು ರಸ್ತೆಯ ರಿಲಯನ್ಸ್ ಟ್ರೆಂಡ್ಸ್ ಕಾರ್ಪೊರೇಷನ್ ಬ್ಯಾಂಕ್ ವಲಯ ಕಚೇರಿಯ ಮುಂಭಾಗ ಸಮಾವೇಶಗೊಂಡ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿದರು.
ನಮ್ಮದು ಹಳ್ಳಿಗಳ ದೇಶ. ಆದರೆ ನಮ್ಮಲ್ಲಿ ಬ್ಯಾಂಕಿಂಗ್ ಸೇವೆ ಇನ್ನೂ ಸಾವಿರಾರು ಹಳ್ಳಿಗಳಿಗೆ ತಲುಪಿಲ್ಲ. ಇಂದಿಗೂ ಸಾವಿರಾರು ಜನ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳ ವಿಸ್ತರಣೆ ಮುಖ್ಯವೇ ಹೊರತು ವಿಲೀನವಲ್ಲ.
ದೇಶದ ಜನಸಂಖ್ಯೆಗೆ ಹೋಲಿಸಿದರೆ ಬ್ಯಾಂಕುಗಳ ಪ್ರಮಾಣ ಕಡಿಮೆ. ಹಾಗಾಗಿ ವಿಲೀನಕ್ಕೆ ನಮ್ಮ ವಿರೋಧವಿದೆ. ಬ್ಯಾಂಕಿಂಗ್ ಸೇವೆ ಎಲ್ಲ ಸ್ತರದ ಜನರನ್ನು ತಲುಪಿಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಜನಧನ ಯೋಜನೆ ಜಾರಿಗೊಳಿಸಿದ್ದು, ಇದೀಗ ಜನಧನ ಯೋಜನೆ-2 ಜಾರಿಗೊಳಿಸಿದೆ. ಈ ಕ್ರಮದಿಂದ ಬ್ಯಾಂಕಿಂಗ್ ಸೇವೆ ಕುಂಠಿತವಾಗಲಿದ್ದು, ವಿಲೀನ ಅನುಚಿತ ಎಂದು ಕಿಡಿ ಕಾರಿದರು.
ಹಲವು ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ದೊಡ್ಡ ಬ್ಯಾಂಕಾಗಿ ಪರಿವರ್ತಿಸಿ ಹೆಚ್ಚುತ್ತಿರುವ ದೊಡ್ಡ ಸಾಲಗಳ ಬೇಡಿಕೆ ಪೂರೈಸುವುದು ವಿಲೀನದ ಹಿಂದಿನ ಉದ್ದೇಶ ಎಂಬುದು ಸರ್ಕಾರದ ನಿಲುವು. ಆದರೆ, ಸಾಲ ದೊಡ್ಡದಾದಂತೆ ಅಪಾಯವೂ ಹೆಚ್ಚು. ಈಗಾಗಲೇ ದೊಡ್ಡ ದೊಡ್ಡ ಸಾಲುಗಳು ಮರುಪಾವತಿಯಾಗದೇ ಬ್ಯಾಂಕಿಂಗ್ ಕ್ಷೇತ್ರ ನಷ್ಟದಲ್ಲಿದೆ. ಅಲ್ಲದೇ ಕಳೆದ ವರ್ಷ 6 ಬ್ಯಾಂಕುಗಳನ್ನು ಎಸ್‌ಬಿಐನೊಂದಿಗೆ ವಿಲೀನಗೊಳಿಸಲಾಯಿತು.
ಆದರೆ, ಎಸ್‌ಬಿಐ ದೊಡ್ಡದಾಗುವುದರ ಬದಲಿಗೆ ಅದರ ಸಮಸ್ಯೆಗಳು ದೊಡ್ಡದಾದವು. ಬ್ಯಾಂಕುಗಳು ಎದುರಿಸುತ್ತಿರುವ ಅನುತ್ಪಾದಕ ಸಾಲಗಳ ಸಮಸ್ಯೆ ಪರಿಹರಿಸಲು ಅಂತಹ ಸಾಲಗಳ ವಸೂಲಾತಿಗೆ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕೇ ವಿನಃ ವಿಲೀನ ಪರಿಹಾರವಲ್ಲ. ಅಲ್ಲದೇ ವಿಲೀನದಿಂದ ಬ್ಯಾಂಕ್ ಶಾಖೆಗಳು ಮುಚ್ಚುತ್ತವೆ. ನಮಗೆ ಬೇಕಿರುವುದು ಶಾಖೆ ಹೆಚ್ಚಳವೇ ಹೊರತು ಮುಚ್ಚುವುದಲ್ಲ.
ಇದರಿಂದಾಗಿ ಹೆಚ್ಚುವರಿ ನೌಕರರ ಸಮಸ್ಯೆಯೂ ಉದ್ಬವಿಸುತ್ತದೆ. ಇದು ನೌಕರಿ ಭದ್ರತೆಗೆ ಅಪಾಯ. ಹೀಗಾಗಿ ಸರ್ಕಾರ ಬ್ಯಾಂಕ್ ವಿಲೀನ ನಿಲ್ಲಿಸಿ ಅನುತ್ಪಾದಕ ಸಾಲಗಳ ಮರುಪಾವತಿಯನ್ನು ತೀವ್ರಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಎಚ್.ಬಾಲಕೃಷ್ಣ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.