ಆನೇಕಲ್: ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಗುರುತರ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದು ಜಿಪಂ ಅಧ್ಯಕ್ಷ ಸಿ.ಮುನಿರಾಜು ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನವಾಗಿ ಚುನಾಯಿತರಾದ ಪದಾಧಿಕಾರಿಗಳ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆನೇಕಲ್ ನೌಕರರ ಸಂಘ ಕಳೆದ ಅವಧಿಯಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ನೌಕರ ಸ್ನೇಹಿಯಾಗಿ ಕೆಲಸ ಮಾಡಿತ್ತು. ನೂತನ ಸಂಘವೂ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ ಮಾತನಾಡಿ, ಸರ್ಕಾರಿ ನೌಕರರ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡುವ ದಿಸೆಯಲ್ಲಿ ಎಲ್ಲಾ ನಿರ್ದೇಶಕರ ಸಲಹೆ ಪಡೆಯಲಾಗಿದೆ.
ಸರ್ಕಾರಿ ನೌಕರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ಮಾಡಲಾಗಿದೆ. ಅಲ್ಲದೇ, ವೃತ್ತಿ ಕೌಶಲ್ಯ ಕಾರ್ಯಾಗಾರ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಹಾಗೂ ಸಂವಾದ ಏರ್ಪಡಿಸಲಾಗುವುದು ಎಂದರು.
ಆನೇಕಲ್ ತಾಲೂಕು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಬೆಂಗಳೂರು ನಗರದ ಮಾದರಿಯ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಭತ್ಯೆ ಪಡೆಯಲು ಸರ್ಕಾರಿ ನೌಕರರ ಸಂಘವು ಪ್ರಯತ್ನ ನಡೆಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ತಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಚಂದ್ರಕಲಾ, ಟಿ.ವಿ.ಬಾಬು, ಮರಸೂರು ಗ್ರಾಪಂ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಮುಖಂಡರಾದ ಪುರುಷೋತ್ತಮ್, ಡಿ.ಮಹದೇಶ್, ಶ್ರೀನಿವಾಸ್, ಬಿಇಒ ಕೆ.ಸಿ.ರಮೇಶ್, ನಾಗರಾಜ್ ಮತ್ತಿತರರಿದ್ದರು.