Advertisement

ಉದ್ಯೋಗ ಹುಡುಕದೇ ಉದ್ಯೋಗ ಕಲ್ಪಿಸಿ 

11:15 AM Jun 25, 2017 | |

ಬೆಂಗಳೂರು: ಯುವಕರು ಉದ್ಯೋಗಕ್ಕಾಗಿ ಅಲೆದಾಡದೆ, ಸ್ವತಃ ಉದ್ಯೋಗ ಸೃಷ್ಟಿಕರ್ತರಾಗಿ ಹೊರಹೊಮ್ಮಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

Advertisement

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್ಕೆಸಿಸಿಐ) ವಿನೂತನ ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸುವ ವಿದ್ಯಾರ್ಥಿಗಳಿಗೆ ನೀಡುವ “ಮಂಥನ-2017′ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಉದ್ಯೋಗಕ್ಕಾಗಿ ನಿತ್ಯ ಲಕ್ಷಾಂತರ ಯುವಕರು ಅಲೆದಾಡುತ್ತಿದ್ದಾರೆ. ಆದರೆ, ಸ್ವತಃ ಉದ್ಯೋಗದಾತರಾಗಬಹುದಾದ ಸಾಮರ್ಥ್ಯ ಯುವಕರಲ್ಲಿದೆ. ಇದಕ್ಕಾಗಿ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜತೆಗೆ ಈ ನಿಟ್ಟಿನಲ್ಲಿ ಉದ್ಯಮಿಗಳು ಯುವ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಹೇಳಿದರು. 

ಬೇಡಿಕೆ-ಪೂರೈಕೆಯಲ್ಲಿ ಅಂತರ: ಒಂದೆಡೆ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಮತ್ತೂಂದೆಡೆ ಕೈಗಾರಿಕಾ ಕ್ಷೇತ್ರ ಮಾನವ ಸಂಪನ್ಮೂಲ ಕೊರತೆ ಎದುರಿಸುತ್ತಿದೆ. ಈ ಬೇಡಿಕೆ ಮತ್ತು ಪೂರೈಕೆಯಲ್ಲಿರುವ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಇದೆ. ನಮ್ಮಲ್ಲಿರುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಉದಾಹರಣೆಗೆ ಈಗಲೂ ಶೀಘ್ರಲಿಪಿ ತರಬೇತಿ ನೀಡಲಾಗುತ್ತಿದೆ. ಆದರೆ, ವಾಸ್ತವವಾಗಿ ಕಂಪ್ಯೂಟರ್‌ ಯುಗದಲ್ಲಿ ಶೀಘ್ರಲಿಪಿ ಯಾರಿಗೆ ಉಪಯೋಗ ಎಂದು ಕೇಳಿದರು. ಆದ್ದರಿಂದ ಕೈಗಾರಿಕೆಗಳಲ್ಲಿನ ಬೇಡಿಕೆಗೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಇದಕ್ಕಾಗಿ ಉದ್ಯಮ ಕ್ಷೇತ್ರವು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. 

Advertisement

ಜರ್ಮನಿಯಲ್ಲಿ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ಒಂದು ಥಿಯಾರಿಟಿಕಲ್‌ ಶಿಕ್ಷಣ ಮತ್ತೂಂದು ಪ್ರಾಯೋಗಿಕ ಶಿಕ್ಷಣ. ಕೈಗಾರಿಕೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುತ್ತವೆ. ಹಾಗಾಗಿ, ಒಂದಿಲ್ಲೊಂದು ಕಡೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಈ ರೀತಿಯ ಕ್ರಿಯಾತ್ಮಕ ಚಿಂತನೆಗೆ ಹೊಂದಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದರು. 

“ಮಂಥನ-2017′ ಸಮಿತಿ ಅಧ್ಯಕ್ಷ ಡಿ. ಸುರೇಶ್‌ಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು. ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ. ದಿನೇಶ್‌, ತೀರ್ಪುಗಾರರ ಸಮಿತಿ ಅಧ್ಯಕ್ಷ ಅಂಕುರ್‌ ಭಾಸಿನ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ರಾಯಚೂರಿನ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಕಾಲೇಜಿನ ಎಸ್‌.ಎ. ವೇಣು (ಪ್ರಥಮ), ಬೆಂಗಳೂರಿನ ಎಂ.ಎಸ್‌. ರಾಮಯ್ಯ ತಾಂತ್ರಿಕ ಸಂಸ್ಥೆಯ ಅಶ್ವಿ‌ನಕುಮಾರ್‌ (ದ್ವಿತೀಯ),

-ರಾಯಚೂರು ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಕಾಲೇಜಿನ ಶಿವಯೋಗೇಶ್‌ ಕುಡಚೆ, ವಿವೇಕ್‌ ಆರ್‌. ಕಾಮತ್‌, ಶ್ರೀಕಾಂತ್‌ (ತೃತೀಯ) ಹಾಗೂ ಡಿ. ಯಲ್ಲಪ್ಪ (ಸಮಾಧಾನಕರ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಚಿಕ್ಕಬಳ್ಳಾಪುರದ ಎಂ. ಸಿಂಧುಶ್ರೀ ಹಾಗೂ ಎಂ. ನವ್ಯಾರಾಣಿ (ಸಮಾಧಾನಕರ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next