ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ದಿ.ಹುಬ್ಬಳ್ಳಿ ಅರ್ಬನ್ ಕೋ-ಆಪ್ ಬ್ಯಾಂಕ್‌ನಿಂದ ನಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಒಂದು ಬಾರಿ ಹೋದ ಸಮಯ ಏನೇ ಕೊಟ್ಟರು ಮತ್ತೆ ಸಿಗಲಾರದು ಎಂಬುದನ್ನು ಅರಿತು ಮುನ್ನೆಡೆಯಬೇಕು. ಓದುವ ಸಮಯದಲ್ಲಿ ಓದು, ಆಟದ ಸಮಯದಲ್ಲಿ ಆಟ, ಉದ್ಯೋಗದ ಸಮಯದಲ್ಲಿ ಉದ್ಯೋಗ ಮಾಡಿದರೆ ಕಷ್ಟಕರ ಸಮಸ್ಯೆಗಳನ್ನು ನಿರಾಯಾಸವಾಗಿ ಬಗೆಹರಿಸಬಹುದು ಎಂದರು.
ಬ್ಯಾಂಕ್‌ನ ಚೇರನ್ ವಿಕ್ರಂ ಶಿರೂರು ಮಾತನಾಡಿ, ಕಳೆದ 5 ವರ್ಷಗಳಿಂದ ಬ್ಯಾಂಕ್‌ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ಗ್ರಾಹಕರು ನಂಬಿಕೆ ಪಾತ್ರರಾಗಿದ್ದೆವೆ. ಅವಳಿನಗರದಲ್ಲಿ ಬ್ಯಾಂಕ್ 7 ಶಾಖೆಗಳನ್ನು ಹೊಂದಿದೆ.
ಗ್ರಾಹಕರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ ಎಂದರು. ಎಸ್ಸೆಸ್ಸೆಲ್ಸಿ 15 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 14 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಫಲಕ ನೀಡಿ ಸನ್ಮಾನಿಸಲಾಯಿತು. ಸಂಗಮೇಶ್ವರ ಸ್ವಾದಿಮಠ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಬ್ಯಾಂಕ್ ನಿರ್ದೇಶಕರಾದ ಉಮಾ ಅಕ್ಕೂರ, ಸೋಮಶೇಖರ ಉಮರಾಣಿ, ನಿರಂಜನ ಹಿರೇಮಠ, ವಾಸೀಂ ದಾದಾಪೀರ, ಮೋಹನ ಶೆಟ್ಟರ, ಬ್ಯಾಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಜೋಶಿ ಇದ್ದರು. ಲಿಂಗರಾಜ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಾವಕಾರ ನಿರೂಪಿಸಿದರು. ಶಾಂತರಾಜ ಪೋಳ ವಂದಿಸಿದರು.