ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿದ್ದು, ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಕೇಂದ್ರಗಳನ್ನು ಪುನಾರಂಭಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್-19 ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇಷ್ಟು ದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಈಗ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು. ಮೊದಲ ಮತ್ತು ಎರಡನೇ ಅವಧಿಯಲ್ಲಿ ವಸತಿ ನಿಲಯ ಹಾಗೂ ಶಾಲೆಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾಡಲಾಗಿತ್ತು. ಶಾಲಾ-ಕಾಲೇಜು ಶುರುವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲೆಯ ಪ್ರತಿ ತಾಲೂಕಿಗೊಂದು, ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಎರಡು ಕೇಂದ್ರ ಆರಂಭಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಕೂಡ ಆರಂಭಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಕಳೆದ ಬಾರಿ ಕೇಂದ್ರಗಳನ್ನು ಅನೇಕ ಸಮಸ್ಯೆ ಹಾಗೂ ಮೂಲ ಸೌಕರ್ಯಗಳ ಸಮಸ್ಯೆ ಎದುರಾಗಿತ್ತು. ಈ ಬಾರಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಕೋವಿಡ್ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರಗಳು ಆರಂಭಿಸಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಸರ್ಕಾರದ ಆದೇಶದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದು. ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದರು.
ಕೋವಿಡ್ ಕೇರ್ ಮತ್ತು ಕೋವಿಡ್ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ವೈದ್ಯರು ಕೊರತೆಯಾಗದಂತೆ ಗಮನ ಹರಿಸಬೇಕು. ಕೋವಿಡ್ ಪ್ರಕರಣಗಳು ಹೆಚ್ಚಾದಂತೆ ನಿಗಾ ವಹಿಸಬೇಕು. ಖಾಸಗಿ ಆಸ್ಪತ್ರೆಗಳು ಕೋವಿಡ್ ಮಾಹಿತಿಯನ್ನು ಕಾಲಕಾಲಕ್ಕೆ ವರದಿ ನೀಡಬೇಕು ಎಂದರು.
ಕೋವಿಡ್ ಚಿಕಿತ್ಸೆಗೆ ಈ ಬಾರಿ ಆಕ್ಸಿಜನ್ ಸಿಲಿಂಡರ್ ಕೊರತೆಯಾಗದಂತೆ ಮುಂಚಿತವಾಗಿ ಸಂಗ್ರಹಿಸಬೇಕು. ಹೆಚ್ಚುವರಿ ಸಂಗ್ರಹ ಮಾಡಿಕೊಳ್ಳಿ, ಆಕ್ಸಿಜನ್ ಲಭ್ಯತೆಯಿದ್ದರೂ ಸಿಲಿಂಡರ್ ಕೊರತೆಯಾಗಬಾರದು. ಕೋವಿಡ್ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಬೇಕು. 2ನೇ ಡೋಸ್ ಪ್ರಮಾಣ ಕಡಿಮೆ ಇದೆ. 2ನೇ ಡೋಸ್ ಗುರಿ ತಲುಪಲು ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ವ್ಯಾಕ್ಸಿನೇಷನ್ ಹಾಕಿಸಲು ವಿದ್ಯಾರ್ಥಿಗಳು ಮಾಹಿತಿ ಪಡೆದು ಶಾಲೆಯಿಂದ ಹೊರ ಉಳಿದ ಮಕ್ಕಳಿಗೂ ವ್ಯಾಕ್ಸಿನೇಶನ್ ಹಾಕಿಸಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಸಹಾಯಕ ಆಯುಕ್ತರು ರಜನಿಕಾಂತ್, ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್, ರಿಮ್ಸ್ ನಿರ್ದೇಶಕ ಡಾ| ಬಸವರಾಜ ಪೀರಾಪುರ, ಡಾ| ಸುರೇಂದ್ರ ಬಾಬು, ಡಾ| ನಾಗರಾಜ, ಐಎಂಎ ಅಧ್ಯಕ್ಷ ಡಾ| ರಾಮಪ್ಪ, ಡಾ| ವಿಜಯಾ, ಸತೀಶ, ವೆಂಕಟೇಶ ಸೇರಿ ಇತರರಿದ್ದರು.