ಬೀದರ: ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಟಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಪೋಷಣ ಅಭಿಯಾನ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಮಕ್ಕಳು ಮತ್ತು ಮಹಿಳೆಯರಲ್ಲಿನ ಅಪೌಷ್ಟಿಕತೆ ಮಟ್ಟ ಕಡಿಮೆಗೊಳಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಡಿಸಿ ರಾಮಚಂದ್ರನ್ ಆರ್. ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಪೋಷಣಾ ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಷಣಾ ಅಭಿಯಾನ ಯೋಜನೆಯಡಿ ಆರೋಗ್ಯ ಇಲಾಖೆಯ ಜತೆಗೂಡಿ ನಿಯಮಿತವಾಗಿ ಗರ್ಭಿಣಿ, ಬಾಣಂತಿ, ಹದಿಹರೆಯದ ಹೆಣ್ಣುಮಕ್ಕಳ ಹಿಮೋಗ್ಲೋಬಿನ್ ತಪಾಸಣೆ ನಡೆಸಬೇಕು. ಜನನ ಸಮಯದಲ್ಲಿ ಕಡಿಮೆ ತೂಕ ಹೊಂದಿರುವ ಮಕ್ಕಳನ್ನು ಗುರುತಿಸುವುದು ಮತ್ತುಪೋಷಕರಿಗೆ ಅಶಕ್ತ ನವಜಾತ ಆರೈಕೆ ಮಾಡುವುದರ ಕುರಿತು ತಿಳಿವಳಿಕೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರು ವರ್ಷದೊಳಗಿನ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆ ತಡೆಗಟ್ಟುವ ಮತ್ತು ಕಡಿಮೆಗೊಳಿಸುವ, ಕಡಿಮೆ ತೂಕದ ಜನನವನ್ನು ಕಡಿಮೆಗೊಳಿಸುವ, 6 ರಿಂದ 59 ತಿಂಗಳ ಚಿಕ್ಕಮಕ್ಕಳಲ್ಲಿ ಉಂಟಾಗುವ ರಕ್ತ ಹೀನತೆ ತಡೆಗಟ್ಟುವ ಹಾಗೂ 15-49 ವರ್ಷದ ಕಿಶೋರಿ ಅಥವಾ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆಗೊಳಿಸುವ ಪೋಷಣಾ ಅಭಿಯಾನ ಯೋಜನೆಯ ಮುಖ್ಯ ಉದ್ದೇಶದ ಸಾಕಾರಕ್ಕೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಮಾತನಾಡಿ, ಪೋಷಣಾ ಅಭಿಯಾನ ಯೋಜನೆಯು ರಾಜ್ಯದಲ್ಲಿ 3 ಹಂತದಲ್ಲಿ ಜಾರಿ ತರಲಾಯಿತು. ಅದರಲ್ಲಿ ಬೀದರ ಮೊದಲನೇ ಹಂತದಲ್ಲಿ ಆಯ್ಕೆ ಗೊಂಡಿರುತ್ತದೆ. ಸೀಮಂತ ಕಾರ್ಯಕ್ರಮ, ಅನ್ನಪ್ರಾಶನ ದಿವಸ, ಸುಪೋಷಣ ದಿವಸ, ಶಾಲಾ ಪೂರ್ವ ಶಿಕ್ಷಣ, ಸಾರ್ವಜನಿಕ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಪ್ರತಿ ಅಂಗನವಾಡಿ ಮಟ್ಟದಲ್ಲಿ ಪ್ರತಿ ತಿಂಗಳು ಮೊದಲನೇ ಮತ್ತು ಮೂರನೇ ಶುಕ್ರವಾರ ಎರಡು ಚಟುವಟಿಕೆಗಳು ಹಮ್ಮಿಕೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು. ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್, ಇನ್ನಿತರ ಅಧಿಕಾರಿಗಳು ಇದ್ದರು.