Advertisement

ಈ ಬಾರಿ ಚೌತಿಗೆ ಬರಲಿದ್ದಾನೆ ತೋಟದ ಗಣಪ 

09:49 AM Aug 30, 2018 | Team Udayavani |

ಮಹಾನಗರ : ಈ ಗಣಪ ಕೇವಲ ಚೌತಿ ಪೂಜೆಗೆ ಸೀಮಿತವಲ್ಲ. ಚೌತಿ ಮುಗಿದು ವಿಸರ್ಜನೆಯಾದ ಬಳಿಕ ಜೀವವಾಯು ಕರುಣಿಸುವ ಗಿಡಗಳ ರೂಪದಲ್ಲಿ ಪ್ರತ್ಯಕ್ಷಗೊಳ್ಳಲಿದ್ದಾನೆ! ಹೌದು. ಪರಿಸರ ಸ್ನೇಹಿ ಗಣಪನ ಆರಾಧನೆ ಕುರಿತು ಸಮಾಜ ಜಾಗೃತಗೊಳ್ಳುತ್ತಿದ್ದಂತೆಯೇ, ಗಣಪನ ಮೂರ್ತಿ ವಿಸರ್ಜನೆ ಬಳಿಕವೂ ಹೊಸ ಹೊಸ ರೀತಿಯ ಪರಿಸರ ಪೂರಕ ಚಟುವಟಿಕೆಗಳಿಗೆ ಮಾದರಿ ಕೆಲಸಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ಆರಾಧನೆಯು ದೇವರ ರೂಪದಲ್ಲಿರುವ ಪ್ರಕೃತಿಯನ್ನು ಕಾಪಾಡುವಂತಿರಬೇಕೆಂಬ ಆಲೋಚನೆಯೇ ಇಂತಕ ಕೆಲಸಗಳಿಗೆ ಕಾರಣ. ಈ ನಿಟ್ಟಿನಲ್ಲಿ ನಗರದ ಐವರು ಸ್ನೇಹಿತರ ತಂಡವೊಂದು ಮುಂದಡಿಯಿಟ್ಟಿದ್ದು, ತೋಟಗಣಪನ ಪರಿಕಲ್ಪನೆಯನ್ನು ಜನರ ಮುಂದಿಟ್ಟಿದ್ದಾರೆ.

Advertisement

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ನಿರ್ಮಿತ ಗಣಪನ ಆರಾಧನೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಮನಗಂಡು ನಿಸರ್ಗಸ್ನೇಹಿ ಗಣಪನ ಆರಾಧನೆಗೆ ಒತ್ತು ಕೊಡುತ್ತಿರುವುದು ಉತ್ತಮ ಬೆಳವಣಿಗೆ. ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಇಕೋ ಫ್ರೆಂಡ್ಸ್‌ ತಂಡ ಆಸಕ್ತರಿಗೆ ತೋಟ ಗಣಪನ ಕಿಟ್‌ ನೀಡಲು ಮುಂದಾಗಿ ಪರಿಸರ ರಕ್ಷಣೆಯ ಕಾಳಜಿಯನ್ನು ಮೆರೆದಿದೆ. ರಾಜೇಶ್‌, ಮನಮೋಹನ್‌ ಸೂರ್ಯ, ವಿಜಯ್‌, ರಾಕೇಶ್‌ ಮತ್ತು ಕೇಶವ್‌ ಅವರೇ ಈ ತಂಡದ ಸದಸ್ಯರು. ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ತಯಾರಿಸಲಾದ ಆವೆ ಮಣ್ಣಿನ ಗಣಪನ ಮೂರ್ತಿಗಳನ್ನು ತಂಡ ನಗರದ ಪಿವಿಎಸ್‌ ಬಳಿಯಿರುವ ಶ್ರೀ ದುರ್ಗಾ ಸಾವಯವ ಮಳಿಗೆಗೆ ತರಿಸಲಿದೆ. ಆಸಕ್ತರು ಆ. 30ರಿಂದ ಸೆ. 9ರ ತನಕ ಮೂರ್ತಿಯನ್ನು ಮುಂಗಡವಾಗಿಯೇ ಕಾಯ್ದಿರಿಸಿಕೊಳ್ಳಬಹುದು ಎಂದು ತಂಡದ ಸದಸ್ಯ ರಾಜೇಶ್‌ ತಿಳಿಸಿದ್ದಾರೆ.

ಕಿಟ್‌ನಲ್ಲೇನಿದೆ?
10 ಮತ್ತು 12 ಇಂಚುಗಳ ಗಣೇಶನ ಮೂರ್ತಿಗಳನ್ನು ತರಿಸಲಾಗುತ್ತದೆ. ವಿಸರ್ಜನೆ ಬಳಿಕ ಗಿಡ ಬೆಳೆಸಲು ಬೇಕಾಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಕಿಟ್‌ನ್ನು ಮೂರ್ತಿಯ ಜತೆಗೆ ನೀಡಲಾಗುತ್ತದೆ. ತೋಟ ಗಣಪ, ಯುವಿ ಸ್ಟೆಬಿಲೈಸ್‌ಡ್‌ ಸ್ಕ್ವಾರ್ ಪಾಟ್‌, ನ್ಯೂಟ್ರಿಯೆಂಟ್‌ ಬ್ಲಾಕ್‌, ಟೊಮೇಟೊ, ಬೆಂಡೆ ಮತ್ತು ತುಳಸಿ ಬೀಜ (ಇದರಲ್ಲಿ ಯಾವುದಾದರೂ ಒಂದು ಗಿಡದ ಬೀಜ), ಅನುಸರಿ ಸಬೇಕಾದ ಕ್ರಮಗಳ ಕುರಿತು ಮಾಹಿತಿ ಕೈಪಿಡಿಯನ್ನು ಕಿಟ್‌ ಒಳಗೊಂಡಿರುತ್ತದೆ.

ಗಿಡಕ್ಕೆ ಆಶ್ರಯನೀತ
ಗಣಪನ ಮೂರ್ತಿ ಆರಾಧನೆ ಬಳಿಕ, ತಂಡ ನೀಡಿರುವ ಕಿಟ್‌ನಲ್ಲಿರುವ ಪಾಟ್‌ ನಲ್ಲಿ ಕೈಪಿಡಿಯಲ್ಲಿರುವ ಮಾಹಿತಿಯಂತೆ ನೀರು ತುಂಬಿಸಬೇಕು. ಬಳಿಕ ಆ ನೀರಿನಲ್ಲಿ ಮೂರ್ತಿಯನ್ನಿಟ್ಟು ಸಂಪೂರ್ಣ ಕರಗಿದ ಬಳಿಕ ಅದಕ್ಕೆ ಸಾವಯವ ವಸ್ತುವನ್ನು ಹಾಕಬೇಕು. ಅನಂತರ ಒಂದು ಇಂಚಿನಷ್ಟು ಅಡಿಯಲ್ಲಿ ತಂಡ ನೀಡಿದ ಬೀಜವನ್ನು ಬಿತ್ತಬೇಕು. ಆರಾಧಿಸಿದ ಮೂರ್ತಿಯನ್ನು ವಿಸರ್ಜಿಸಿದ ಜಾಗದಲ್ಲಿ ಈ ಬೀಜ ಟಿಸಿಲೊಡೆದು ಗಿಡವಾಗಿ ಬೆಳೆಯುತ್ತದೆ. ನಿತ್ಯ ನೀರುಣಿಸುವುದನ್ನು ಮುಂದುವರಿಸಿ. ತುಳಸಿ ಗಿಡವೂ ಮನೆ ಸುತ್ತಲಿನ ಬ್ಯಾಕ್ಟೀರಿಯಗಳನ್ನು ನಾಶ ಮಾಡುವಲ್ಲಿ ಪ್ರಮುಖವಾಗಿರುತ್ತದೆ ಎನ್ನುತ್ತಾರೆ ರಾಜೇಶ್‌.

 ಧನ್ಯಾ ಬಾಳೆಕಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next