Advertisement

ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿ: ಸಚಿವ ಹಾಲಪ್ಪ ಆಚಾರ್‌ ಸೂಚನೆ

04:08 PM Sep 05, 2022 | Team Udayavani |

ಬೆಂಗಳೂರು: ಪೋಷಣ್‌ ಅಭಿಯಾನದಂತಹ ಮಹತ್ವಾಕಾಂಕ್ಷಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಂದು ಬೆಂಗಳೂರಿನ ಮಡಿವಾಳದಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ರಾಜ್ಯ ಮಟ್ಟದ ಪೋಷಣ್‌ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕೇಂದ್ರ ಪುರಸ್ಕೃತ ಪೋಷಣ್‌ ಅಭಿಯಾನ ಯೋಜನೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ನಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿ ಸಮರ್ಥವಾಗಿ ಪೋಷಣ್‌ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಮೂಲಕ ರಾಜ್ಯದಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣ ಶೇಕಡಾ 0.17 ಕ್ಕೆ ಇಳಿದಿದೆ. ಇದನ್ನ ಇನ್ನಷ್ಟು ಇಳಿಸುವ ನಿಟ್ಟಿನಲ್ಲಿ ಈ ತಿಂಗಳಿನಾದ್ಯಂತ ಇಲಾಖೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಸೆಪ್ಟೆಂಬರ್‌ 1 ರಿಂದ 30 ರ ವರೆಗೆ ಒಂದು ತಿಂಗಳು ಪೋಷಣ್‌ ಅಭಿಯಾನದ ಕೈಗೊಳ್ಳಲಾಗುತ್ತಿದ್ದು, ಗರ್ಭಿಣಿ, ಬಾಣಂತಿಯರು, ಮಕ್ಕಳು ಮತ್ತು ಪ್ರಾಯಪೂರ್ವ ಬಾಲಕಿಯರಲ್ಲಿ ಅಪೌಷ್ಟಿಕತೆಯ ನಿವಾರಣೆಯ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಆಶಯವನ್ನು ಸಾಕಾರಗೊಳಿಸುವುದು ನಮ್ಮ ಉದ್ದೇಶವಾಗಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವ ಅವಶ್ಯಕತೆ ಹೆಚ್ಚಾಗಿದೆ. ನಗರ ಪ್ರದೇಶಗಳ ಅಂಗನವಾಡಿಗಳಲ್ಲಿ ಕೇವಲ ದಾಖಲಾತಿಗಳಲ್ಲಿ ಮಾತ್ರ ಮಕ್ಕಳು ಮತ್ತು ಮಹಿಳೆಯರ ನೊಂದಣಿಯಿದ್ದು, ಸರಕಾರದ ಯೋಜನೆಗಳ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಇಂತಹ ಜನಸ್ನೇಹೀ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲಾ ಮಟ್ಟದ ಅಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಬೇಕು. ಈ ಮೂಲಕ ಯೋಜನೆಗಳು ಸಮರ್ಪಕವಾಗಿ ಜನರನ್ನ ತಲುಪಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಅಪೌಷ್ಟಿಕತೆಯ ನಿವಾರಣೆಗೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ 4244 ಹೊಸ ಅಂಗನವಾಡಿಗಳ ಪ್ರಾರಂಭಕ್ಕೆ ಅನುಮೋದನೆ ನೀಡಿದ್ದಾರೆ. ರಾಜ್ಯದ ಎಲ್ಲ ಭಾಗಗಳಲ್ಲೂ ಇರುವಂತಹ ಅಪೌಷ್ಟಿಕತೆಯ ಪಿಡುಗನ್ನು ಹೊಡೆದೋಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಣತೊಟ್ಟಿವೆ. ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿರುವ ಪೌಷ್ಟಿಕ ಆಹಾರವನ್ನು ಇನ್ನಷ್ಟು ಉತ್ತಮಗೊಳಿಸಬೇಕು ಎನ್ನುವ ಆಶಯ ನನ್ನದಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಈ ವರ್ಷದಿಂದ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ಮಾತ್ರವಲ್ಲ ಸಾಧಾರಣ ಅಪೌಷ್ಟಿಕತೆಯುಳ್ಳ ಮಕ್ಕಳಿಗೂ ಹೆಚ್ಚುವರಿಯಾಗಿ ಮೂರು ದಿನ ಮೊಟ್ಟೆ, ಮತ್ತು ಮೂರು ದಿನ ಹಾಲನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿ ಪದಾರ್ಥಗಳನ್ನು ಮನೆಗಳಿಗೆ ತಲುಪಿಸಲಾಗುತ್ತಿದ್ದು, ಹೀಗಾಗಿ ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣ ಕುಗ್ಗಿದೆ ಎಂದು ಸಚಿವರು ಹೇಳಿದರು.

ಮಾಂಟೆಸ್ಸರಿ ಆನ್‌ ವೀಲ್ಸ್‌ ಗೆ ಚಾಲನೆ: ಬೆಂಗಳೂರು ನಗರದ ಕೊಳಗೇರಿ ಪ್ರದೇಶದಲ್ಲಿರುವ ಅಂಗನವಾಡಿಯ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿಯು 10 ಬಸ್ ಗಳಲ್ಲಿ “ಮಾಂಟೆಸ್ಸರಿ ಆನ್‌ ವೀಲ್ಸ್‌”ನ್ನು ನಿರ್ಮಿಸಲಾಗಿದ್ದು, ಇಂದು ಇದಕ್ಕೆ ಸಚಿವರು ಚಾಲನೆ ನೀಡಿದರು.

Advertisement

ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ನೀಡಲು ಇಲಾಖೆಯು ಪ್ರೀಥಿಂಕಿಂಗ್‌ ಫೌಂಡೇಶನ್‌ ಸಹಯೋಗದೊಂದಿಗೆ “ಮಾಂಟೆಸ್ಸರಿ ಆನ್‌ ವೀಲ್ಸ್‌” ಎಂಬ ಕಾರ್ಯಕ್ರಮದ ಭಾಗ ಇದಾಗಿದೆ. ಪ್ರಸ್ತುತ ಈ ಕಾರ್ಯಕ್ರಮಕ್ಕಾಗಿ ಮೊದಲು 10 ಬಸ್‌ಗಳನ್ನು ಬಿಬಿಎಂಪಿಯವರು ಒದಗಿಸಿದ್ದಾರೆ. ಈ ಬಸ್ಸುಗಳು ಬೆಂಗಳೂರಿನ ಕೊಳಗೇರಿ ಪ್ರದೇಶದಲ್ಲಿರುವ ಅಂಗನವಾಡಿಯ ಮಕ್ಕಳನ್ನು ಪ್ರತಿದಿನ 2.5 ಗಂಟೆಗಳ ಕಾಲ ಬಸ್ಸಿನಲ್ಲಿ ಮಕ್ಕಳಿಗೆ ವಿಷಯಾಧಾರಿತ ಪ್ರಾಯೋಗಿಕ ಕಲಿಕೆಯನ್ನು ನೀಡಲಿದೆ. ಬೆಂಗಳೀರನ ಕೊಳಗೇರಿಗಳಲ್ಲಿ ವಾಸಿಸುವ 3 ವರ್ಷದಿಂದ 6 ವರ್ಷ ವಯಸ್ಸಿನ ಅಂಚಿನಲ್ಲಿರುವ ಮಕ್ಕಳ ಮನೆ ಬಾಗಿಲಿಗೆ ಆರಂಭಿಕ ಕಲಿಕೆಯನ್ನು ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಪ್ರತಿ ಬಸ್ಸಿನ ಮೂಲಕ ಒಂದು ಬಾರಿಗೆ, ಬ್ಯಾಚ್‌ಗಳಲ್ಲಿ 50 ಮಕ್ಕಳಿಗೆ ಶಿಕ್ಷಣ ನೀಡಬಹುದಾಗಿದೆ. ಸಮಗ್ರ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು, ಎಲ್ಲಾ ಮಾಂಟೆಸ್ಸರಿ ಸಾಮಗ್ರಿಗಳು, ತರಬೇತಿ ಪಡೆದ ಶಿಕ್ಷಕರು, ಮಿನಿ-ಲೈಬ್ರರಿ ಮತ್ತು ಆಡಿಯೋ ದೃಶ್ಯ ಸಾಧನಗಳೊಂದಿಗೆ ಬಸ್‌ ನ್ನು ಸಿದ್ದಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next