ಹುಬ್ಬಳ್ಳಿ: ವ್ಯಾಪಾರಿಗಳಿಗೆ ಹಾಗೂ ಜನರಿಗೆ ಅನುಕೂಲವಾಗುವಂತೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಎರಡು ಪ್ರಮುಖ ಮಾರುಕಟ್ಟೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
ಮಂಗಳವಾರ ಇಲ್ಲಿನ ಜನತಾ ಬಜಾರ್ ಹಾಗೂ ಎಂಜಿ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎರಡು ಮಾರುಕಟ್ಟೆಗಳು ಅತ್ಯಾಧುನಿಕ ಸೌಲಭ್ಯ ಹೊಂದಲಿವೆ. ಇಲ್ಲಿನ ವ್ಯಾಪಾರಿಗಳಿಗೆ ಹಾಗೂ ಮಾರುಕಟ್ಟೆಗೆ ಆಗಮಿಸುವ ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನಿರ್ಮಿಸಲಾಗುವುದು. ಪ್ರಮುಖವಾಗಿ ಮೂಲ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, 18 ಕೋಟಿ ವೆಚ್ಚದಲ್ಲಿ ಜನತಾ ಬಜಾರ್ ಮಾರುಕಟ್ಟೆ ಅಭಿವೃದ್ಧಿ ಹೊಂದುತ್ತಿದೆ. ಒಂದು ವಾರದೊಳಗೆ ಇಲ್ಲಿನ ವ್ಯಾಪಾರಿ ಸಂಘದ ಪ್ರಮುಖರೊಂದಿಗೆ ಚರ್ಚಿಸಿ ವ್ಯಾಪಾರಿ ಕಟ್ಟೆ ಅಳತೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾರ್ಯ ಆರಂಭವಾಗುವುದರಿಂದ ದಾಜೀಬಾನ ಪೇಟೆ ರಸ್ತೆಯ ಎರಡು ಕಡೆಗಳಲ್ಲೂ ತಾತ್ಕಾಲಿಕವಾಗಿ ಅಂಗಡಿ ಸ್ಥಳಾಂತರಿಸಿ ಶೆಡ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಎಂಜಿ ಮಾರುಕಟ್ಟೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ವ್ಯಾಪಾರಿ ಕಟ್ಟೆಯನ್ನು 8/8 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುವಂತೆ ವ್ಯಾಪಾರಿಗಳ ಬೇಡಿಕೆಯಿತ್ತು. ಇದರಿಂದ 177 ಕಟ್ಟೆಗಳನ್ನು ನಿರ್ಮಿಸಲು ಕಷ್ಟವಾಗುತ್ತದೆ. ಹೀಗಾಗಿ 7/7 ಡಿ ವಿಸ್ತೀರ್ಣದ ಕಟ್ಟೆಗಳ ನಿರ್ಮಾಣಕ್ಕೆ ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ. ಬೀದಿ ವ್ಯಾಪಾರಿಗಳನ್ನು ಕೂಡ ಇದೇ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂಬ ಚಿಂತನೆ ಇದೆ ಎಂದರು.
ತೊಂದರೆಯಾಗದಂತೆ ಕ್ರಮ: ಇದಕ್ಕೂ ಮೊದಲು ಮಾರುಕಟ್ಟೆ ವ್ಯಾಪಾರಿಗಳ ಸಲಹೆ ಪಡೆದ ಜಿಲ್ಲಾಧಿಕಾರಿ ದೀಪಾ ಚೋಳನ್, ನಮ್ಮ ಯೋಜನೆ ಪ್ರಕಾರ ವ್ಯಾಪಾರಿ ಕಟ್ಟೆಗಳನ್ನು ನಿರ್ಮಿಸುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಾಪಾರಿಗಳಿಂದ ವ್ಯಕ್ತವಾಗಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಳಾಂತರಿಸುವ ಸಂಬಂಧ ದಾಜೀಬಾನ ಪೇಟೆ ರಸ್ತೆ ವೀಕ್ಷಿಸಿದರು. ವ್ಯಾಪಾರಿಗಳ ಮನವಿ: ಎಂಜಿ ಮಾರುಕಟ್ಟೆಗೆ ಭೇಟಿ ನೀಡಿದ ಶಾಸಕ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ ವ್ಯಾಪಾರಿಗಳು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಾರುಕಟ್ಟೆ ಅಭಿವೃದ್ಧಿ ಪಡಿಸುತ್ತಿರುವುದು ಸಂತಸದ ವಿಚಾರವಾಗಿದೆ. ಮಳೆಗಾಲದಲ್ಲಿ ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೆ ತಾತ್ಕಾಲಿಕವಾಗಿ ಒಂದಿಷ್ಟು ಪರಿಹಾರ ನೀಡುವಂತೆ ಒತ್ತಾಯಿಸಿದರು.
ಮಾರುಕಟ್ಟೆಯಲ್ಲಿ ಶ್ರೀ ನಿಮಿಷಾಂಬಾ ದೇವಿ ದೇವಸ್ಥಾನ ಮುಂಭಾಗದಲ್ಲಿ ಓಡಾಡಲು ಅನುಕೂಲವಾಗುವಂತೆ ಪೇವರ್ಹಾ ಕಿಸುವಂತೆ ಮನವಿ ಮಾಡಿದರು. ನಂತರ ಜಿಲ್ಲಾಧಿಕಾರಿ ದೀಪಾ ಅವರು, ಹಳೇಹುಬ್ಬಳ್ಳಿಯ 100 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಕಾರವಾರ ರಸ್ತೆಯ ಕೆಪಿಟಿಸಿಎಲ್ ವಸತಿಗೃಹ ಪರಿಶೀಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಮಾಜಿ ಸದಸ್ಯ ಯಮನೂರ ಜಾಧವ ಇನ್ನಿತರರಿದ್ದರು.
ಮಾಂಸದಂಗಡಿ ತೆರವಿಗೆ ಒತ್ತಾಯ ಜನತಾ ಬಜಾರ್‌ನ ಅಂಚಟಗೇರಿ ಓಣಿಯಲ್ಲಿ 3 ಮಾಂಸದ ಅಂಗಡಿಗಳಿದ್ದು, ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಬಿಸಾಡುವುದರಿಂದ ದುರ್ವಾಸನೆಗೆ ಕಾರಣವಾಗಿದೆ. ಈ ಅಂಗಡಿಗಳನ್ನು ತೆರವುಗೊಳಿಸುವಂತೆ ವರ್ಷದಿಂದ ಮಹಾನಗರ ಪಾಲಿಕೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳ ಪರಿಶೀಲನ ಮಾಡುವಂತೆ ಸ್ಥಳೀಯರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು. ಕೂಡಲೇ ಈ ಮನವಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಅವರಿಗೆ ಸೂಚಿಸಿದರು. ಈ ಕುರಿತು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಭರವಸೆ ನೀಡಿದರು.