Advertisement

ಚುನಾವಣಾ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು​​​​​​​

06:55 AM May 03, 2018 | Team Udayavani |

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣಾ ಪ್ರಕ್ರಿಯೆ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿರುವ
ಚುನಾವಣಾ ಆಯೋಗ, ಹಲವು ಪ್ರಥಮಗಳಿಗೆ ಕರ್ನಾಟಕದಿಂದ ನಾಂದಿ ಹಾಡಿದೆ. ಅದರಲ್ಲಿ “ಚುನಾವಣಾ ಆ್ಯಪ್‌’ ಹಾಗೂ “ವೆಬ್‌ ಆಧರಿತ ಡ್ಯಾಷ್‌ ಬೋರ್ಡ್‌’ ಅತ್ಯಂತ ಪ್ರಮುಖವಾಗಿದೆ.

Advertisement

ಒಬ್ಬ ಮತದಾರನಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆದುಕೊಳ್ಳಲು “ಚುನಾ ವಣಾ ಆ್ಯಪ್‌’
ರೂಪಿಸಲಾಗಿದೆ. ಅಲ್ಲದೆ, ಹಿಂದಿನ ಚುನಾವಣೆಗಳಿಗೆ ಸಂಬಂಧಿಸಿದ ಅಂಕಿ -ಅಂಶಗಳ ವಿವರಗಳನ್ನು ಅಂಗೈನಲ್ಲೇ ಪಡೆದು ಕೊಳ್ಳಲು ಅನುಕೂಲವಾಗುವಂತೆ ಡ್ಯಾಷ್‌ ಬೋರ್ಡ್‌ ತಯಾರಿಸಲಾಗಿದೆ. ಈ ಎರಡು ಪ್ರಯತ್ನಗಳನ್ನು ದೇಶದಲ್ಲೇ ಮೊದಲ ಬಾರಿ ಮಾಡಲಾಗಿದ್ದು, ಬುಧವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಚುನಾವಣಾ ಆ್ಯಪ್‌ ಹಾಗೂ ಡ್ಯಾಷ್‌ ಬೋರ್ಡ್‌ ಲೋಕಾರ್ಪಣೆಗೊಳಿಸಿದರು.

ಚುನಾವಣೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳಿಂದ ಕೂಡಿರುವ ಆ್ಯಪ್‌ನ್ನು “ಚುನಾವಣಾ” ಹೆಸರಿನಲ್ಲಿ ಕರ್ನಾಟಕ ಮುಖ್ಯ
ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದ್ದು, ನಾಗರಿಕರಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್‌ನ್ನು ಕೆಎಪಿ ಸಮೀಕ್ಷೆಯಲ್ಲಿನ ಅಂಶಗಳ ಆಧಾರದ ಮೇಲೆ  ಅಭಿವೃದ್ಧಿ 
ಪಡಿಸಲಾಗಿದೆ. //kgis.ksrsac.im/election/URL ಗೆ ಲಾಗಿನ್‌ ಆಗುವ ಮೂಲಕ ಆ್ಯಪ್‌ ಮತ್ತು ಡ್ಯಾಷ್‌ ಬೋರ್ಡ್‌ ಪ್ರವೇಶಿಸಬಹುದು.

ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಮತದಾನ ಕುರಿತ ವಿವಿಧ 13 ಲೇಖನಗಳನ್ನು ಇದು ಹೊಂದಿದೆ. ವಾರ್ತಾ ಇಲಾಖೆ ಪ್ರಕಟಿಸಿರುವ ಇಂಗ್ಲಿಷ್‌ ಮಾಸಿಕ “ಮಾರ್ಚ್‌ ಆಫ್ ಕರ್ನಾಟಕ’ ಮತ್ತು ಕನ್ನಡ ಭಾಷೆಯ “ಜನಪದ’ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

ಆ್ಯಪ್‌ನ ವಿಶೇಷತೆ ಆ್ಯಪ್‌ ಮತ್ತು ಡ್ಯಾಷ್‌ ಬೋರ್ಡ್‌ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ ಅಧಿಕಾರಿ ಜಯಚಂದ್ರನ್‌, ಇಡೀ ರಾಜ್ಯದ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ನೋಡಲು ಇಲ್ಲಿ ಸಾಧ್ಯವಿದೆ. 56,696 ಮತಕೇಂದ್ರಗಳು ಮತ್ತು ಅವುಗಳ ಮ್ಯಾಪ್‌(ನಕಾಶೆ) ಇದ್ದು, ಎಪಿಕ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ನಮೂದಿಸುವ ಮೂಲಕ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.

Advertisement

ಈ ಆ್ಯಪ್‌ನ್ನು ಚುನಾವಣಾ ವೇಳೆಯಲ್ಲಷ್ಟೇ ಅಲ್ಲದೆ ಇನ್ನಿತರ ಸಂದರ್ಭಗಳಲ್ಲೂ ಬಳಸಬಹುದು. ಹೊಸ ಮತದಾರರಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇಲ್ಲವೇ ತುರ್ತು ಸಂದರ್ಭಗಳಲ್ಲಿ ಹತ್ತಿರದ ಪೊಲೀಸ್‌ ಠಾಣೆ ಅಥವಾ ಆರೋಗ್ಯ ಕೇಂದ್ರಗಳನ್ನು ತಲುಪಲು ಬಳಸಬಹುದಾಗಿದೆ. ಆ್ಯಪ್‌ ಮೂಲಕ ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿರುವುದರಿಂದ ಪರಿಣಾಮಕಾರಿಯಾಗಿ ಚುನಾವಣೆ ನಡೆಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಹಕಾರಿಯಾಗಲಿದೆ ಎಂದರು.

ಮತದಾರರಿಗೆ ಅನುಕೂಲ
ಕೆಎಪಿ ಸಮೀಕ್ಷೆಯಲ್ಲಿ ಶೇ.25ರಷ್ಟು ಮಂದಿ ತಮಗೆ ಮತಗಟ್ಟೆ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದ ಕಾರಣ ಮತದಾನ ಮಾಡುತ್ತಿಲ್ಲ ಎಂದಿದ್ದರೆ, ನಗರ ಪ್ರದೇಶದ ಶೇ.17.5 ರಷ್ಟು ಮಂದಿ ಉದ್ದದ ಸರತಿ ಸಾಲುಗಳಲ್ಲಿ ನಿಲ್ಲಲಾಗುವುದಿಲ್ಲ ಎಂಬ ಕಾರಣದಿಂದ ಮತ ಚಲಾಯಿಸುವುದಿಲ್ಲ ಎಂದಿದ್ದರು. ಹಾಗೆಯೇ ಶೇ.7.5ರಷ್ಟು ನಗರ ಪ್ರದೇಶದ ಮತದಾರರು ತಮ್ಮ ಕ್ಷೇತ್ರದಲ್ಲಿರುವ ಅಭ್ಯರ್ಥಿ ಮತ್ತು ತಮ್ಮ ಮತಕ್ಷೇತ್ರದ ಬಗ್ಗೆ ಗೊತ್ತಿಲ್ಲದಿರುವುದರಿಂದ ಮತದಾನ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನವಣಾ ಆ್ಯಪ್‌ ಸಿದ್ದಪಡಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್‌ ತಿಳಿಸಿದರು.

ಡ್ಯಾಷ್‌ ಬೋರ್ಡ್‌
ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆಯು ಜಿಐಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಆಧರಿತ ವೆಬ್‌ ಪೋರ್ಟಲ್‌ ಆಗಿದೆ.
ಕರ್ನಾಟಕದಲ್ಲಿನ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇದರಲ್ಲಿ ಲಭ್ಯ. ಸದರಿ ವೆಬ್‌ಸೈಟ್‌ನಲ್ಲಿ ಮತಕೇಂದ್ರ ಮತ್ತು ಮತಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಾಹಿತಿಗಳು ಸೇರಿದಂತೆ ಮತಗಟ್ಟೆಯಲ್ಲಿ ಲಭ್ಯವಿರುವ ಮಾಹಿತಿಗಳ ಬಗ್ಗೆಯೂ ವಿವರವಿರುತ್ತದೆ. ಕ್ಷೇತ್ರದ ಜನಸಂಖ್ಯೆಯ ವಿವರ, ಮತಪಟ್ಟಿ ವಿವರ, ಹಿಂದಿನ ಚುನಾವಣೆಯ ಅಂಕಿ-ಅಂಶ, ಅಭ್ಯರ್ಥಿಗಳ ವಿವರ, ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಅಂತರ ಸೇರಿದಂತೆ ಹಲವಾರು ವಿವರಣಾತ್ಮಕ ಮತ್ತು ತುಲನಾತ್ಮಕ ಮಾಹಿತಿಗಳು ಇದರಲ್ಲಿ ದೊರೆಯುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next