Advertisement

ಸಿಬಿಎಸ್‌ಇಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು

08:53 AM Feb 27, 2019 | |

ವಿದ್ಯಾರ್ಥಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಹೆತ್ತವರು ಮಕ್ಕಳನ್ನು ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಶಾಲೆಗಳಿಗೆ ಕಳುಹಿಸುತ್ತಾರೆ. ಇತ್ತೀಚೆಗೆ ಸಿಬಿಎಸ್‌ಇ ಪಠ್ಯಕ್ರಮ ಶಿಕ್ಷಣ ಪದ್ಧತಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Advertisement

ಖಾಸಗಿ ಮತ್ತು ಪಬ್ಲಿಕ್‌ ಸಿಬಿಎಸ್‌ಇ ಶಾಲೆಗಳಲ್ಲಿ ಕೇಂದ್ರ ಸರಕಾರ ಪಠ್ಯಕ್ರಮದ ಮೂಲಕ ನಡೆಯುವ ಶಿಕ್ಷಣ ಪದ್ಧತಿ ಇದ್ದು, ಮಂಗಳೂರಿನಲ್ಲಿ ಸುಮಾರು 45ಕ್ಕೂ ಹೆಚ್ಚಿನ ಸಿಬಿಎಸ್‌ಇ ಶಾಲೆಗಳಿವೆ. ಸಾಮಾನ್ಯವಾಗಿ 1ರಿಂದ 10ನೇ ತರಗತಿವರೆಗೆ ಮತ್ತು ಪ್ರಥಮ, ದ್ವಿತೀಯ ಪಿಯುಸಿ ಶಿಕ್ಷಣಕ್ಕೆ ಸಿಬಿಎಸ್‌ಇ ಪರೀಕ್ಷೆ ಪದ್ಧತಿಯಲ್ಲಿ ಅವಕಾಶವಿದೆ. ಸಿಬಿಎಸ್‌ಇ, ಸಾಮಾನ್ಯ ಶಾಲೆಗಳಲ್ಲಿ ಎನ್‌ಸಿ ಆರ್‌ಟಿ ಪಠ್ಯಕ್ರಮ ಮುಖೇನವೇ ಪಾಠ ನಡೆಯುತ್ತದೆ. ಕೆಲವು ಬಾರಿ ಸಿಬಿಎಸ್‌ಇ, ರಾಜ್ಯ ಸರಕಾರದ ಪಠ್ಯಕ್ರಮ ರೀತಿ ಬೇರೆ ಬೇರೆ ಆಗಿರಬಹುದು. ಅಲ್ಲದೆ, ರಾಜ್ಯ ಪಠ್ಯಕ್ರಮ ಆಧಾರಿತ ಶಾಲೆ, ಸಿಬಿಎಸ್‌ಇ ಶಾಲೆಗಳಿಗೆ ಪಶ್ನೆಪತ್ರಿಕೆಯ ಮಾದರಿಯಲ್ಲಿ ವ್ಯತ್ಯಾಸವಿರುತ್ತದೆ.

ಸಿಬಿಎಸ್‌ಇ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿ ಮತ್ತು ಪ್ರಥಮ- ದ್ವಿತೀಯ ಪಿಯುಸಿಗೆ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿಪರೀಕ್ಷೆ ನಡೆಯುತ್ತದೆ. ಆದರೆ, ಆಯ್ಕೆ ವಿಷಯವಾರು ಪರೀಕ್ಷೆ ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತದೆ. ಸಿಬಿಎಸ್‌ಇ ಪಠ್ಯಕ್ರಮ ದಲ್ಲಿ ಹತ್ತನೇ ತರಗತಿಗೆ ಮೊದಲ ಭಾಷೆಯಾಗಿ ಇಂಗ್ಲಿಷ್‌ ಆಯ್ಕೆ ಮಾಡಬಹುದು. ದ್ವಿತೀಯ ಭಾಷೆಯಾಗಿ ಕನ್ನಡ, ಹಿಂದಿ, ತಮಿಳು ಸಹಿತ ಸ್ಥಳೀಯ ಭಾಷೆಯ ಆಯ್ಕೆಗೆ ಅವಕಾಶವಿದೆ. ಪಿಯುಸಿಗೆ ಪ್ರಥಮ ಭಾಷೆಯಾಗಿ ಇಂಗ್ಲಿಷ್‌ ಇದ್ದು, ಒಂದರಿಂದ ಎಂಟನೇ ತರಗತಿಯವರೆಗೆ ಮೂರು ಭಾಷಾ ಪತ್ರಿಕೆಗಳ ಆಯ್ಕೆ ಇದೆ. 9 ಮತ್ತು 10ನೇ ತರಗತಿಗೆ ಎರಡು ಭಾಷೆ ಮತ್ತು ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಎರಡು ಭಾಷಾ ಪತ್ರಿಕೆಗಳಿವೆ.

ಸಿಬಿಎಸ್‌ಇ ಶಿಕ್ಷಣ ಪಡೆಯಬೇಕಾದರೆ ಸಾಮಾನ್ಯವಾಗಿ ಕೇಂದ್ರೀಯ ವಿದ್ಯಾಲಯದಲ್ಲಿ ಮಾರ್ಚ್‌ ತಿಂಗಳಲ್ಲಿಯೇ ದಾಖಲಾತಿ ಆರಂಭವಾಗುತ್ತದೆ. ಕೆಲವು ಖಾಸಗಿ ಶಾಲೆಗಳಲ್ಲಿ ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ದಾಖಲಾತಿ ಪ್ರಾರಂಭಿಸುತ್ತವೆ. ಆಯ್ಕೆ ಪ್ರಕ್ರಿಯೆ ಮೆರಿಟ್‌ ಆಧಾರಿತವಾಗಿಯೂ ನಡೆಯುತ್ತದೆ.

ಸಿಬಿಎಸ್‌ಇಯಲ್ಲಿ ಶಾಲೆಯಲ್ಲಿ ಪ್ರತಿಯೊಂದು ತರಗತಿಯಲ್ಲಿಯೂ 40 ವಿದ್ಯಾರ್ಥಿಗಳವರೆಗೆ ದಾಖಲಾತಿಗೆ ಅವಕಾಶವಿದೆ. ಎಲ್ಲ ತರಗತಿಯಲ್ಲಿ ತಿಂಗಳ ಪರೀಕ್ಷೆ ನಡೆಯುತ್ತದೆ. 1ರಿಂದ 10ನೇ ತರಗತಿಯವರೆಗೆ 20 ಆಂತರಿಕ ಅಂಕ ಇದ್ದು, 80 ಅಂಕಗಳಲ್ಲಿ ಪರೀಕ್ಷೆ ನಡೆಯುತ್ತದೆ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆಯಲ್ಲಿ 30 ಅಂಕ ಇಂಟರ್‌ನಲ್‌, ಉಳಿದ 70 ಅಂಕದಲ್ಲಿ ಪರೀಕ್ಷೆ ನಡೆಯುತ್ತದೆ. ಗಣಿತ ಮತ್ತು ಭಾಷೆ ಪತ್ರಿಕೆಗೆ 100 ಅಂಕದಲ್ಲಿ ಮತ್ತು ವಾಣಿಜ್ಯಶಾಸ್ತ್ರಕ್ಕೆ 10 ಇಂಟರ್‌ನಲ್‌ ಮತ್ತು 90 ಅಂಕದಲ್ಲಿ ಪರೀಕ್ಷೆ ನಡೆಯುತ್ತದೆ. ಸಿಬಿಎಸ್‌ಇಯಲ್ಲಿ ಈ ವರ್ಷದಿಂದ ದೈಹಿಕ ಶಿಕ್ಷಣಕ್ಕೆ ಮತ್ತು ವರ್ಕ್‌ ಎಜುಕೇಶನ್‌ಗೆ ಒತ್ತು ನೀಡಿದೆ. 

Advertisement

ಕೌಶಲ ವೃದ್ಧಿ
ದಿನನಿತ್ಯದ ಪಠ್ಯಕ್ರಮವನ್ನು ಅದೇ ದಿನ ಕಲಿತರೆ ವಿದ್ಯಾರ್ಥಿಗಳಿಗೆ ಯಾವುದೇ ಪಠ್ಯ ಕಷ್ಟವಾಗುವುದಿಲ್ಲ. ಕೆಲವರು ಹೆಚ್ಚಿನ ಅಭ್ಯಾಸಕ್ಕೆ ಕೋಚಿಂಗ್‌ಗೆ ಹೋಗುತ್ತಾರೆ. ಸಿಬಿಎಸ್‌ಇ ಕಲಿಕೆಯಿಂದ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮಕ್ಕಳ ಕೌಶಲ ಬೆಳವಣಿಗೆ ಹೆಚ್ಚುತ್ತದೆ.
– ಗಿರೀಶ್‌ ಸುವರ್ಣ
ಗಣಕ ವಿಜ್ಞಾನ ಪ್ರಾಧ್ಯಾಪಕ,
ಲೂರ್ಡ್ಸ್‌ ಸೆಂಟ್ರಲ್‌ ಶಾಲೆ, ಮಂಗಳೂರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next