Advertisement

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

05:41 PM Jan 25, 2022 | Team Udayavani |

ಹುಬ್ಬಳ್ಳಿ: ನಗರದ ವಾರ್ಡ್‌ಗಳಲ್ಲಿ ಸ್ವಚ್ಛತಾ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಗರದ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

Advertisement

ಇಲ್ಲಿನ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸೋಮವಾರ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ವಾರ್ಡ್‌ಗಳ ಪುನರ್ವಿಂಗಡನೆಯಿಂದ ವಾರ್ಡ್‌ಗಳ ಸಂಖ್ಯೆ ಹೆಚ್ಚಾದರೂ ಹಳೆಯ ವಾರ್ಡ್‌ಗಳ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರತಿ ವಾರ್ಡ್‌ ಗಳಲ್ಲಿ ಸ್ವಚ್ಛತಾ ಕೆಲಸ ನಿರೀಕ್ಷೆಯಂತೆ ಸಾಗುತ್ತಿಲ್ಲ. ಹಳೇ ಹುಬ್ಬಳ್ಳಿ ಭಾಗದ ಕೆಲ ವಾರ್ಡ್‌ಗಳಲ್ಲಿ ಕಸದ ಟಿಪ್ಪರ್‌ ವಾಹನಗಳು ಜನರ ಮನೆ ಬಾಗಿಲ ಬಳಿ ತಲುಪಲಾಗುತ್ತಿಲ್ಲ. ಹೀಗಾಗಿ ಜನರು ತಮ್ಮ ಮನೆ ಕಸವನ್ನು ವಾಹನಕ್ಕೆ ಹಾಕಲಾಗದೇ ರಸ್ತೆ ಸೇರಿದಂತೆ
ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಸ್ವಚ್ಛತಾ ನಿರ್ವಹಣೆ ಕಷ್ಟಕರವಾಗುತ್ತಿದೆ. ಕಸದ ಟಿಪ್ಪರ್‌ ವಾಹನಗಳು ಹೋಗಲಾಗದಂಥ ಪ್ರದೇಶಗಳಲ್ಲಿ (ಪುಶ್‌ ಕಾರ್ಟ್ಸ್) ತಳ್ಳುಗಾಡಿ ಒದಗಿಸುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ, ಸರಕಾರದ ನಿಯಮಾವಳಿಯಂತೆ ಪ್ರಸ್ತುತ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರು
ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಹೆಚ್ಚಿನ ಪೌರ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಧಾರವಾಡದ ಕೆಲವೆಡೆ ಪುಶ್‌ ಕಾರ್ಟ್ಸ್ ಒದಗಿಸಿದ್ದು, ಶೀಘ್ರವೇ ವಲಯ ಆಯುಕ್ತರೊಂದಿಗೆ ಸಭೆ ನಡೆಸಿ ಎಲ್ಲೆಲ್ಲಿ ತಳ್ಳುಗಾಡಿಗಳ ಅವಶ್ಯಕತೆಯಿದೆ ಎಂಬುದನ್ನು ಪರಿಶೀಲಿಸಿ ಆದ್ಯತೆ ಮೇರೆಗೆ ಒದಗಿಸಲಾಗುವುದು ಎಂದರು.

ಯುಜಿಡಿಯಲ್ಲಿನ ಕಸ-ಕಡ್ಡಿ ತೆಗೆಯಲು ಬಳಸುವ ಡಿ-ಶಿಲ್ಟಿಂಗ್‌ ವಾಹನವು ಇಡೀ ಕ್ಷೇತ್ರಕ್ಕೆ ಕೇವಲ ಒಂದು ಮಾತ್ರವಿದ್ದು, ಇದರಿಂದ ಯುಜಿಡಿ ಸಮಸ್ಯೆ ನಿವಾರಿಸಲಾಗುತ್ತಿಲ್ಲ. ಆದ್ದರಿಂದ ಪ್ರತಿ ವಲಯಕ್ಕೆ ಕನಿಷ್ಟ ಒಂದಾದರೂ ಒದಗಿಸುವಂತೆ ಶಾಸಕರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಪಾಲಿಕೆಯಲ್ಲಿ ಪ್ರಸ್ತುತ 5 ಡಿ-ಶಿಲ್ಟಿಂಗ್‌ ಮಶೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸದಾಗಿ ಏಳು ಮಶೀನ್‌ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವು ಮಂಜೂರಾದ ನಂತರ ಪ್ರತಿ ವಲಯಕ್ಕೆ ಒಂದರಂತೆ ಮಶೀನ್‌ಗಳು ಕಾರ್ಯ ನಿರ್ವಹಿಸಲಿವೆ ಎಂದರು.

Advertisement

ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸರಕಾರಿ ಜಾಗೆಗಳು ಲಭ್ಯವಿಲ್ಲದ್ದರಿಂದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆದರೆ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪಾಲಿಕೆ ಒಡೆತನದ ಖುಲ್ಲಾ ಜಾಗೆಗಳನ್ನು ಖಾಸಗಿಯವರು ಅತಿಕ್ರಮಿಸಿಕೊಂಡು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಅವನ್ನು ಕೂಡಲೇ ತೆರವುಗೊಳಿಸಿ ಖುಲ್ಲಾ ಜಾಗೆಗಳು ಅತಿಕ್ರಮಣವಾಗದಂತೆ ಫೆನ್ಸಿಂಗ್‌ ಅಳವಡಿಸಬೇಕು. ಅಲ್ಲದೇ ಗಾರ್ಡನಪೇಟೆ, ಗಣೇಶಪೇಟೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಪಾಲಿಕೆ ಒಡೆತನದ ಕಟ್ಟಡಗಳನ್ನು ಕೂಡಲೇ ತೆರವು ಮಾಡಬೇಕೆಂದು ಶಾಸಕರು ಆಯುಕ್ತರಿಗೆ ಸೂಚಿಸಿದರು.

ಕುಡಿಯುವ ನೀರಿನ ಪೈಪ್‌ಲೈನ್‌ದಲ್ಲಿ ಕೆಲವೆಡೆ ಯುಜಿಡಿ ನೀರು ಮಿಶ್ರಣವಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಾರ್ಡ್‌ಗಳ ನಡುವೆ ಗಡಿರೇಖೆ ಗುರುತಿಸಬೇಕು. ಬೀದಿದೀಪಗಳ ಅಳವಡಿಸಬೇಕು. ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಧಿಕಾರಿಗಳು ಅನಗತ್ಯ ವಿಳಂಬ ಮಾಡದೇ ಕಾಲಮಿತಿಯೊಳಗೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಶಾಸಕರು ಸೂಚಿಸಿದರು. ಜೊತೆಗೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಪಾಲಿಕೆ ಜಂಟಿ ಆಯುಕ್ತ ಆನಂದ ಕಲ್ಲೋಳಿಕರ, ಅಧೀಕ್ಷಕ ಅಭಿಯಂತರ ಟಿ. ತಿಮ್ಮಪ್ಪ, ಇಇ ವಿಜಯಕುಮಾರ ಹಾಗೂ ಪಾಲಿಕೆಯ ವಲಯಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ, ಜಲಮಂಡಳಿ, ವಿದ್ಯುತ್‌ ವಿಭಾಗದ ಅಧಿಕಾರಿಗಳು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next