ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಹುಸಿ ಬಾಂಬ್ ಕರೆಗಳು ಮಾಡಿ ವಿದ್ಯಾರ್ಥಿ ಪೋಷಕರಲ್ಲಿ ತಲ್ಲಣ ಮೂಡಿಸಿದ ಬೆನ್ನಲೇ ಎಚ್ಚೆತ್ತಿಕೊಂಡಿರುವ ಶಿಕ್ಷಣ ಇಲಾಖೆ, ರಾಜ್ಯದ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ನೀಡುವಂತೆ ರಾಜ್ಯದ ಎಲ್ಲಾ ಶಾಲಾ ಮುಖ್ಯ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿದೆ.
ಹೌದು, ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇನ್ನಿತರೆ ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ರಾಜ್ಯದ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಸಂಬಂಧ ಹೊರಡಿಸಿರುವ ಸುತ್ತೋಲೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆಟದ ಮೈದಾನ ಅನ್ಯರು ಬಳಸುವಂತಿಲ್ಲ: ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತುಪಡಿಸಿ ಇತರೇ ಚಟುವಟಿಕೆಗಳಿಗೆ ಇಲಾಖೆ ಅನುಮತಿ ಇಲ್ಲದೇ ಬಳಸಿಕೊಳ್ಳುವುದಕ್ಕೆ ಹಾಗೂ ಅನುಮತಿಸುವುದಕ್ಕೆ ಅವಕಾಶ ನೀಡಬಾರದೆಂದು ಸೂಚನೆ ನೀಡಿದ್ದು, ವಿಶೇಷವಾಗಿ ಶಾಲೆಗಳ ಆಟದ ಮೈದಾನಗಳು ಮಕ್ಕಳ ದೈನಂದಿನ ಪಾಠ ಪ್ರವಚನಗಳಿಗೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹಾಗೂ ಆಟೋಟ ಕಾರ್ಯಕ್ರಮಗಳಿಗೆ, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕೆಂದು ಸುತ್ತೋಲೆ ಯಲ್ಲಿ ಸೂಚಿಸಿರುವ ಶಿಕ್ಷಣ ಇಲಾಖೆಯು, ಶಾಲೆಯ ಆಟದ ಮೈದಾನವನ್ನು ಶೈಕ್ಷಣಿಕ ಉದ್ದೇಶಗಳಿಗೆ ಹೊರತುಪಡಿಸಿ, ಉಳಿದ ಯಾವುದೇ ಚಟುವಟಿಕೆಗಳಿಗೆ ನಡೆಸಲು ಅನುಮತಿ ನೀಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಶಾಲಾ ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಶಾಲಾ ಮುಖ್ಯ ಶಿಕ್ಷಕರು ಹೆಚ್ಚಿನ ಕಾಳಜಿ, ಮುತುವರ್ಜಿ ವಹಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಅನಾಮಧೇಯ ಪತ್ರ, ಕರೆ ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ: ಶಾಲೆಗಳ ಆವರಣದ ಬಳಿ ಸಂಬಂಧವಿರದ ಅನಾಮಧೇಯ ವ್ಯಕ್ತಿಗಳು ಅನಗತ್ಯವಾಗಿ ಸುತ್ತಾಡುತ್ತಿರುವುದು ಕಂಡು ಬಂದಲ್ಲಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಲ್ಲಿ ಹಾಗೂ ಯಾವುದೇ ವ್ಯಕ್ತಿಗಳಿಂದ ಶಾಲಾ ಸುರಕ್ಷತೆಗೆ ಭಂಗ ತರುವತಂಹ ಅನಾಮಧೇಯ ದೂರವಾಣಿ ಕರೆಗಳು, ಪತ್ರಗಳು ಬಂದಲ್ಲಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಲ್ಲಿ ಇಲಾಖಾಧಿಕಾರಿಗಳು ಕೂಡಲೇ ಪೊಲೀಸರ ಗಮನಕ್ಕೆ ತರಬೇಕೆಂದು ಸುತ್ತೋಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ, ಡಯಟ್ ಪ್ರಾಂಶುಪಾಲರಿಗೆ, ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.
ಜಿಲ್ಲಾದ್ಯಂತ 2000ಕ್ಕೂ ಶಿಕ್ಷಣ ಸಂಸ್ಥೆಗಳು: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳು ಬರೊಬ್ಬರಿ 2000ಕ್ಕೂ ಅಧಿಕ ಶಾಲೆಗಳಿದ್ದು ಸುಮಾರು ಒಂದೂವರೆ ಲಕ್ಷ ಮಕ್ಕಳು ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಒಂದಿಷ್ಟು ಭದ್ರತೆ ಇದ್ದರೂ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ಸಮರ್ಪಕವಾಗಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಇಲ್ಲದೇ, ಕಾಂಪೌಂಡ್ ಇದ್ದರೂ ಪ್ರವೇಶ ದ್ವಾರ ಇಲ್ಲದೇ ಪುಂಡರು, ಪೋಕರಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಬ್ರೇಕ್ ಹಾಕಿ ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಡಬೇಕಿದೆ.
–ಕಾಗತಿ ನಾಗರಾಜಪ್ಪ