Advertisement

ಕ್ವಾರಂಟೈನ್‌ ವ್ಯವಸ್ಥೆಗೆ ಒತ್ತು

11:52 PM Mar 22, 2020 | Lakshmi GovindaRaj |

ಬೆಂಗಳೂರು: ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ ನಾಗರೀಕರು ಗೃಹ ಬಂಧನದಲ್ಲಿರಲು ನಿರಾಕರಿಸಿದರೆ ಅಂತಹ ವ್ಯಕ್ತಿಗಳನ್ನು ಸರ್ಕಾರದ ಕ್ವಾರಂಟೈನ್‌ ನಲ್ಲಿಟ್ಟು ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು.

Advertisement

ಭಾನುವಾರ ಸಂಜೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದ ಜನತಾ ಕರ್ಫ್ಯೂಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಅದನ್ನು ಹೀಗೆ ಸ್ವಯಂಪ್ರೇರಿತವಾಗಿ ಮುಂದುವರಿಸಿ. ಎಲ್ಲೆಂದರಲ್ಲಿ ಗುಂಪು ಸೇರುವುದು ಬೇಡ.

ವಿದೇಶದಿಂದ ಬಂದವರು ಮನೆಯಲ್ಲಿಯೇ ಇರಬೇಕು. ನಿರ್ಲಕ್ಷಿಸಿ ಹೊರಗಡೆ ಓಡಾಡುವುದು ಸರಿಯಲ್ಲ. ಒಂದು ವೇಳೆ ಮನೆಯಿಂದ ಹೊರಗೆ ಬಂದರೆ ಸರ್ಕಾರದ ಕ್ವಾರಂಟೈನ್‌ನಲ್ಲಿಟ್ಟು ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಹೇಳಿದರು.

20 ಸಾವಿರ ಜನರ ಗುರುತು!: ಮಾ.8ರಿಂದ ಮಾ.19ರವರೆಗೆ ವಿದೇಶದಿಂದ ರಾಜ್ಯಕ್ಕೆ 43 ಸಾವಿರ ಮಂದಿ ಆಗಮಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರಿಗೆ ನೀಡುವ ಅರ್ಜಿಯಲ್ಲಿ ಸ್ವವಿವರ ಹಾಗೂ ವಿಳಾಸವನ್ನು ಭರ್ತಿ ಮಾಡಿದ್ದಾರೆ. ಈ ಮಾಹಿತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಆರೊಗ್ಯ ಇಲಾಖೆಗೆ ಕೊಟ್ಟಿದ್ದು, ಅದರಲ್ಲಿ 20 ಸಾವಿರ ಮಂದಿಯ ವಿಳಾಸ ಗುರುತಿಸಲಾಗಿದೆ.

ಇನ್ನುಳಿದವರ ವಿಳಾಸ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ಜತೆಗೂಡಿ 500 ತಂಡಗಳನ್ನು ರಚಿಸಲಾಗಿದೆ. ವಿದೇಶದಿಂದ ಬಂದವರ ಮನೆಗೆ ಭೇಟಿ ಕೊಟ್ಟು ಕೈಗೆ ಮೊಹರು ಹಾಕಲಿದ್ದಾರೆ. ಅಲ್ಲದೆ, ಸ್ಥಳೀಯ ಠಾಣೆಯ ಇಬ್ಬರು ಸಿಬ್ಬಂದಿ ಗಸ್ತು ತಿರುಗಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಗುಂಪು ಸೇರಬೇಡಿ: ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಪರಿಸ್ಥಿತಿಯ ಬಗ್ಗೆ ಉದಾಸೀನತೆ ತೋರುವುದು ಬೇಡ. ಕೊರೊನಾ ವೈರಸ್‌ ವಿದೇಶ ಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಅದರ ವಿರುದ್ಧ ಯುವಕರು ಎಚ್ಚೆತ್ತುಕೊಳ್ಳಬೇಕು. ಇಬ್ಬರಿಗಿಂತ ಜಾಸ್ತಿ ಜನ ಸೇರುವುದು ಬೇಡ. ಅದರಿಂದ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.

ಮೆಜೆಸ್ಟಿಕ್‌ನಲ್ಲಿದ್ದ ಶಂಕಿತ ವ್ಯಕ್ತಿ: ಜನತಾ ಕರ್ಫ್ಯೂನಿಂದಾಗಿ ಹೋಟೆಲ್‌, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಮಾಡಿದ್ದರಿಂದ ಊಟದ ಸಮಸ್ಯೆಯಾಗಿತ್ತು. ಮೆಜೆಸ್ಟಿಕ್‌ ಸಮೀಪ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬರು, ಭಾನುವಾರ ಬೆಳಗ್ಗೆ 9.30ರಲ್ಲಿ ಊಟಕ್ಕಾಗಿ ಹೊರಬಂದಿದ್ದರು. ಈ ವೇಳೆ ಜನರು ಗಾಬರಿಗೊಂಡಿದ್ದಾರೆ. ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರು ಕೊರೊನಾ ವೈರಸ್‌ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅದೇ ರೀತಿ ಎಲ್ಲರೂ ಪಾಲಿಸಬೇಕು.
-ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next