ಯಾದಗಿರಿ: ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ಕರ, ನೀರಿನ ಕರ, ಜಾಹೀರಾತು ಕರ, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿ ಆರ್ಥಿಕ ಸದೃಢತೆ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಿವಿಧ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಕಾಲಮಿತಿಯೊಳಗೆ ಎಲ್ಲ ರೀತಿಯ ಕರ ವಸೂಲಿ ಮಾಡಬೇಕು. ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ನಿಗದಿತ ಗುರಿಗೆ ಅನುಗುಣವಾಗಿ ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆ ಪೂರ್ಣಗೊಳಿಸಬೇಕು. ಪ್ರಾರಂಭವಾಗದ ಮನೆಗಳನ್ನು ಕೂಡಲೇ ಪ್ರಾರಂಭಗೊಳಿಸಬೇಕು. ವ್ಯಕ್ತಿಗತ ಯೋಜನೆಯಡಿ ನಿಗದಿಪಡಿಸಿದ ಅನುದಾನ ಕೂಡಲೇ ನಿಯಮಾನುಸಾರ ಕ್ರಮ ಜರುಗಿಸಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಅಧಿಕಾರಿಗಳು ನಗರದ ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ, ಘನ ತ್ಯಾಜ್ಯ ವಿಂಗಡಣೆ ನಿರ್ವಹಣೆ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ನಗರದಲ್ಲಿ ಸ್ವತ್ಛತೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಪ್ರಥಮ ಆದ್ಯತೆ ವಹಿಸಬೇಕು. ಮನೆ-ಮನೆ ಕಸ ಸಂಗ್ರಹಣೆ ಮತ್ತು ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ತಮ್ಮ ನಗರದ ಎಲ್ಲ ವಾರ್ಡ್‌ಗಳಲ್ಲಿ ಜಾರಿಗೆ ತರಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ಪೌರಾಯುಕ್ತ ಬಕ್ಕಪ್ಪ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.