Advertisement

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಕೌಶಲಕ್ಕೆ ಒತ್ತು: ಪ್ರೊ| ಗುರುರಾಜ ಕುಲಕರ್ಣಿ

06:09 PM Jun 20, 2023 | Team Udayavani |

ಮುಂಬಯಿ: ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುವುದು ಒಂದು ಒಳ್ಳೆಯ ಕ್ರಮ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ಹೊಂ
ದಿಕೊಂಡಿರುವ ವಾತಾವರಣದಿಂದ ಹೊರಬಂದು ಹೊಸದನ್ನು ಕಲಿತು, ಕಲಿಸುವ ಪಠ್ಯ ಕ್ರಮ ಈ ರಾಷ್ಟ್ರೀಯ ಶಿಕ್ಷಣದಲ್ಲಿ ಬರಬೇಕು. ವಿಜ್ಞಾನದ ವಿಷಯದಲ್ಲಿ ಹೇಳುವುದಾದರೆ ಕೆಲವರು ಪಾಲಕರ ಒತ್ತಾಯಕ್ಕೆ ರಸಾಯನ ಶಾಸ್ತ್ರ, ಭೌತಶಾಸ್ತ್ರ ಅಧ್ಯಯನ ಮಾಡುತ್ತಾರೆ. ಆದರೆ ಅವರಿಗೆ ಆ ವಿಷಯಗಳಲ್ಲಿ ಆಸಕ್ತಿಯೇ ಇರುವುದಿಲ್ಲ ಎಂದು ಪುಣೆಯ ವಾಡಿಯಾ ಕಾಲೇಜಿನ ಪ್ರಾಧ್ಯಾಪಕ, ಅನುವಾದಕ ಪ್ರೊ| ಗುರುರಾಜ ಕುಲಕರ್ಣಿ ತಿಳಿಸಿದರು.

Advertisement

ಸಾಂತಾಕ್ರೂಜ್‌ ಪೂರ್ವದ ವಿದ್ಯಾನಗರಿಯ ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ವತಿಯಿಂದ ಜೂ. 16ರಂದು
ನಡೆದ ಮುಂಬಯಿ ವಿಶ್ವವಿದ್ಯಾನಿಲಯ ಧನ ಸಹಾಯ ಅಯೋಗ (ಯುಜಿಸಿ) ಜಾರಿಗೆ ತರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಹೊಸ ಶಿಕ್ಷಣ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ವಿದ್ಯಾರ್ಥಿಗಳ ಕೌಶಲಕ್ಕೆ ಒತ್ತುಕೊಡಲಾಗುತ್ತದೆ ಎಂದರು.

ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಸಮನ್ವಯಕ ರಾಗಿ ಭಾಗವಹಿಸಿದ್ದರು. ಮುಂಬಯಿಯ
ಸಂಜೀವಿನಿ ಆಸ್ಪತ್ರೆಯ ನಿರ್ದೇಶಕ ಡಾ| ಸುರೇಶ್‌ ರಾವ್‌ ಮಾತನಾಡಿದರು.

ವಿಜ್ಞಾನಿ, ನಾಟಕಕಾರ ಡಾ| ಮಂಜುನಾಥ್‌ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣದ ಮೂಲಕ ಆಯಾಯ ಪ್ರತಿಭೆಗಳಿಗೆ ಸೂಕ್ತ
ಅವಕಾಶಗಳು ದೊರೆಯುವಂತಾಗಬೇಕು. ನಮ್ಮ ಸುತ್ತಮುತ್ತಲಿನ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು. ವಿಜ್ಞಾನವಾಗಲಿ, ವೇದಾಂತವಾಗಲಿ ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಕುರಿತು ಕುತೂಹಲಕರ ಪ್ರಶ್ನೆಗಳು ಮೂಡಬೇಕು. ಅದಕ್ಕೆ ಸರಿಯಾದ ಗುರುಗಳನ್ನು ಆರಿಸಬೇಕು. ಈಗ ಇರುವ ಗೀಜಗದ ಗೂಡಿನಂತಿರುವ ಪಠ್ಯ ಕ್ರಮದಿಂದ ಹೊರಬರಬೇಕು ಎಂದು ಹೇಳಿದರು.

ಹಿರಿಯ ತಂತ್ರಜ್ಞಾನಿ ಕೆ. ಮಂಜುನಾಥಯ್ಯ ಮಾತನಾಡಿ, ಬೇರೆ ಬೇರೆ ವಿಷಯಗಳನ್ನು ಸಂಗ್ರಹಿಸಿ ಅದಕ್ಕೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಿ, ನಮ್ಮಲ್ಲಿರುವ ನೂರಕ್ಕೂ ಹೆಚ್ಚು ವಿವಿಗಳು ತಮ್ಮ ತಮ್ಮ ಕ್ಷೇತ್ರದ ಸಣ್ಣ ಸಣ್ಣ ತುಣುಕುಗಳನ್ನು ಆರಿಸಿ ವಿಚಾರ ವಿಮರ್ಶೆ ಮಾಡಿ ವಿದ್ಯಾರ್ಥಿಗಳನ್ನು ಅವರ ಆಸಕ್ತಿಯ ಕ್ಷೇತ್ರದಲ್ಲಿ ತಯಾರುಗೊಳಿಸಬೇಕು. ಇನ್ನು ಮುಂದೆ 45-50 ವರ್ಷಗಳಲ್ಲಿ ಆದ ಬದಲಾವಣೆ ಕೇವಲ ಹತ್ತು ವರ್ಷಗಳಲ್ಲಿ ಬಹಳ ವೇಗವಾಗಿ ಆಗುತ್ತದೆ. ಅದಕ್ಕೆ ನಮ್ಮ ಮಕ್ಕಳನ್ನು ಸಿದ್ಧಗೊಳಿಸಬೇಕು. ಬದಲಾವಣೆ ಪ್ರಪಂಚದ ನೀತಿ ಎಂದರು.

Advertisement

ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ ಮಾತನಾಡಿ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಆಯುರ್ವೇದ, ಜೋತಿಷ, ವೇದಾಂತ
ಮೊದಲಾದ ಶಾಖೆಗಳಿಗೆ ಪಠ್ಯದಲ್ಲಿ ಹೆಚ್ಚಿನ ಅವಕಾಶ ನೀಡಬೇಕು. ಅದರ ಉಪಯೋಗ,  ಮಹತ್ವವನ್ನು ನಾವು ಕಡೆಗಣಿಸುವಂತಿಲ್ಲ. ಅಂತಹ ಅಪೂರ್ವವಾದ ಕಲೆಯನ್ನು ಮುಂದಿನ ಜನಾಂಗ ಬೆಳೆಸಬೇಕೆಂದರೆ ಅದಕೆ ಸರಿಯಾದ ತರಬೇತಿ ನೀಡಬೇಕು. ಅದನ್ನು ಈ ಪಠ್ಯ ಕ್ರಮದಿಂದ ಮಾಡಲು ಸಾಧ್ಯವಿದೆ ಎಂದರು.

ಎನ್‌. ಆರ್‌. ರಾವ್‌ ಮಾತನಾಡಿ, ನಾವು ಹೊಸ ಹೊಸ ವಿಷಯಗಳನ್ನು ಅಳವಡಿಸಬೇಕು. ಅದರ ಕುರಿತು ಅನ್ವೇಷಣೆ ನಡೆಸಬೇಕು. ಮುಂದಿನ ಪಠ್ಯದಲ್ಲಿ ಪ್ರಶ್ನೋಪನಿಷತ್ತುಗಳು ಹೆಚ್ಚು ಇರಬೇಕು. ಪ್ರಶ್ನಿಸುವ ಮನೋಭಾವವನ್ನು ಮೂಡಿಸುವ ಕೆಲಸ ಮಾಡಬೇಕು. ಅದಕ್ಕೆ ಒಳ್ಳೆಯ ಅಧ್ಯಾಪಕ ರನ್ನು ಆಯ್ಕೆ ಮಾಡಬೇಕು. ನಾವೀಗ ತುಂಬಾ ಮುಂದುವರಿದಿದ್ದೇವೆ. ಅದರಲ್ಲಿಯೇ ಇನ್ನಷ್ಟು ಒಳ್ಳೆಯ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬ್ಯಾಂಕಿಂಗ್‌ ಕ್ಷೇತ್ರದ ಕುರಿತು ನಿತ್ಯಾನಂದ ಕೋಟ್ಯಾನ್‌ ಮಾತನಾಡಿ, ನಾವು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭಕ್ಕೂ ಈಗಿನ ಶಿಕ್ಷಣಕ್ಕೂ ವ್ಯತ್ಯಾಸವಿದೆ. ಈಗ ಬ್ಯಾಂಕಿಂಗ್‌ ಅಂದರೆ ಡಿಜಿಟಲ್‌ ಆಗಿಬಿಟ್ಟಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕು. ಗ್ರಾಹಕರಲ್ಲಿ ವೈಯಕ್ತಿಕ ವಾಗಿ ಬೆರೆತು ಮಾತನಾಡುವ ಕಲೆಯನ್ನು ಬೆಳೆಸಬೇಕು ಎಂದರು.

ಎಂಜಿನಿಯರ್‌ ಕ್ಷೇತ್ರದ ಹಿನ್ನೆಲೆಯಿಂದ ಬಂದ ಡಾ| ಉಮಾ ರಾಮರಾವ್‌ ಮಾತನಾಡಿ, ಖಾಸಗಿ ಎಂಜಿನಿಯರ್‌ ಕಾಲೇಜು
ಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ಪಠ್ಯಕ್ರಮಗಳನ್ನು ಅಳವಡಿಸ ಬೇಕು. ಇಲ್ಲವಾದಲ್ಲಿ ಅವರು ಈ ಕ್ಷೇತ್ರದಲ್ಲಿ
ತಮ್ಮ ವ್ಯಕ್ತಿತ್ವ ಬೆಳೆಸುವಲ್ಲಿ ಅವಕಾಶ ವಂಚಿತರಾಗುತ್ತಾರೆ. ಅರ್ಹರನ್ನು ಆಕರ್ಷಿಸುವಂತಹ ಪ್ರಾಧ್ಯಾಪಕರನ್ನು ಆಯ್ಕೆ ಮಾಡ
ಬೇಕು ಎಂದರು.

ಪಾಲಕರ ನೆಲೆಯಲ್ಲಿ ಕನ್ನಡ ವಿಭಾಗದ ಕಲಾ ಭಾಗ್ವತ್‌, ರಾಜಶ್ರೀ ಶೆಟ್ಟಿ, ವಿದ್ಯಾ ರಾಮಕೃಷ್ಣ, ಸುನಿಲ್‌ ದೇಶ ಪಾಂಡೆ, ಸುರೇಖಾ ದೇವಾಡಿಗ, ಸವಿತಾ ಶೆಟ್ಟಿ, ಅಂಬಿಕಾ ದೇವಾಡಿಗ, ಗಾಯತ್ರಿ, ಆಶಾ ಸುವರ್ಣ ಮೊದಲಾದವರು ಸಂವಾದ ದಲ್ಲಿ ಪಾಲ್ಗೊಂಡರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು.

ಕಾಲ ಕಳೆದಂತೆ ಶಿಕ್ಷಣ ಪದ್ಧತಿಯೂ ಬದಲಾಗುತ್ತ ಹೋಗುತ್ತದೆ. ನಾವು ವೈದ್ಯಕೀಯ ಶಿಕ್ಷಣ ಕಲಿಯುವಾಗ ಎಂಡೋಸ್ಕೋಪಿ,
ಲ್ಯಾಪ್ರೊಸ್ಕೋಪಿಯ ಬಗ್ಗೆ ವಿಶೇಷ ಅಧ್ಯಯನ ಇರಲಿಲ್ಲ. ಈಗ ಪ್ರತಿಯೊಂದು ವಿಭಾಗದಲ್ಲಿಯೂ ವಿಶೇಷ ತರಬೇತಿ ಇರುತ್ತದೆ. ಹಿಂದಿನ ಕ್ರಮದಲ್ಲಿ ಆಪರೇಷನ್‌ ಮಾಡಿದ ನುರಿತ ವೈದ್ಯರನ್ನು ಇಂದಿನ ಯುವ ಜನಾಂಗದವರು ಅಪಹಾಸ್ಯ ಮಾಡುತ್ತಾರೆ. ಆದ್ದರಿಂದ ಕಾಲಕಾಲಕ್ಕೆ ಅಪ್ಡೆಟ್‌ ಮಾಡಿಕೊಳ್ಳಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಹೊಸತನ್ನು ಅರಿತುಕೊಳ್ಳುವ ಶಿಕ್ಷಣ ಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ರೀತಿ ತಿಳಿದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಒತ್ತಡಕ್ಕೆ ಮಣಿದು ವೈದ್ಯಕೀಯ
ಶಿಕ್ಷಣಕ್ಕೆ ಸೇರಿಕೊಳ್ಳಬಾರದು. ಇದರಿಂದ ಎಲ್ಲ ವಿಧದಲ್ಲೂ ನಷ್ಟವೇ. ವಿದ್ಯಾರ್ಥಿಗಳು ಸ್ವ ಆಸಕ್ತಿಯಿಂದ ಬಂದರೆ ಪರವಾಗಿಲ್ಲ. ಒಂದು ವರ್ಷದಲ್ಲಿ ಅವರಿಗೆ ವೈದ್ಯಕೀಯ ಶಿಕ್ಷಣ ರುಚಿಸಲಿಲ್ಲವೆಂದಾದರೆ ಬೇರೆ ಕೋರ್ಸನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಇದ್ದಾಗ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು, ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳಲು ಅನುಕೂಲವಾಗುತ್ತದೆ.
-ಡಾ| ಸುರೇಶ್‌ ಎಸ್‌. ರಾವ್‌, ಅಧ್ಯಕ್ಷ
ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ, ಸಯಾನ್‌

ಮುಂಬಯಿ ವಿವಿ ಆದೇಶದ ಪ್ರಕಾರ ಈ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಿದ್ದೇವೆ.
ಈ ಕುರಿತು ವಿವಿಧ ಕ್ಷೇತ್ರದ ಸಾಧಕರನ್ನು, ಅನುಭವಿಗಳನ್ನು ಆಮಂತ್ರಿಸಿ ಚರ್ಚಿಸುವ ನೆಲೆಯಲ್ಲಿ ಈ ಪೂರ್ವಭಾವಿ ಸಭೆ ಆಯೋಜಿಸಿದ್ದೇವೆ. ಮುಂಬಯಿ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೊಸಬಗೆಯ ಪಠ್ಯಕ್ರಮವನ್ನು ಅಳವಡಿಸುವಾಗ ಯಾವ ರೀತಿಯ ಶಿಕ್ಷಣ ನೀಡಬೇಕೆಂಬ ಬಗ್ಗೆ ವಿಚಾರ ವಿಮರ್ಶೆ  ನಡೆಸುವ ಉದ್ದೇಶ ನಮ್ಮದು. ಶಿಕ್ಷಣ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳ ಬುದ್ಧಿ, ಹೃದಯವನ್ನು ಅರಳಿಸುವ ಕೆಲಸವನ್ನು ಶಿಕ್ಷಣದ ಮೂಲಕ ಮಾಡಬೇಕು.
-ಡಾ| ಜಿ. ಎನ್‌. ಉಪಾಧ್ಯ, ಮುಖ್ಯಸ್ಥರು
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next