ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅವಶ್ಯಕತೆ ಇರುವ ಕಡೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣ ಇಳಿಮುಖಕ್ಕೆ ಕ್ರಮ ವಹಿಸಬೇಕೆಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿದ್ದು, ಈ ಬಗ್ಗೆ ಲೋಕೋಯೋಗಿ ಇಲಾಖೆ ಅಧಿಕಾರಿಗಳು, ಕೂಡಲೇ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಾಕೀತು ಮಾಡಿದರು.
ಸಿಗ್ನಲ್ ದೀಪಗಳನ್ನು ದುರಸ್ತಿಗೊಳಿಸಿ: ಜಿಲ್ಲೆಯ ಸ್ಥಳೀಯ ನಗರಸಭೆ, ಪುರಸಭೆ ಮತ್ತು ಪಪಂ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಗರಗಳಲ್ಲಿ ರಸ್ತೆ ಬದಿ ದೀಪಗಳ ಹಾಗೂ ಸಿಗ್ನಲ್ ದೀಪಗಳ ಕಾರ್ಯನಿರ್ವಹಣೆಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ನಗರದ ಹಲವಾರು ಕಡೆ ಇರುವ ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿಸಬೇಕು.
ರಾಷ್ಟ್ರೀಯ ಹೆದ್ದಾರಿ ಹಾಗೂ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಕಡ್ಡಾಯವಾಗಿ ಬಸ್ ನಿಲ್ದಾಣ ನಿರ್ಮಿಸಲು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಲಹೆ ಪಡೆದು ಕಾಮಗಾರಿ ಪ್ರಾರಂಭಿಸಬೇಕು. ರಸ್ತೆಯ ಬದಿ ಹಾಗೂ ಸಿಗ್ನಲ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿ ಟೀವಿ ಗಳನ್ನು ಖುದ್ದಾಗಿ ಅಧಿಕಾರಿಗಳು ಪರಿಶೀಲಿಸಬೇಕು ಎಂದರು. ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು ತಾಲೂಕುಗಳಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೂಡಲೇ ಕ್ರಮ ಜರುಗಿಸಿ ಗುರುತಿಸಿರುವ ಜಾಗಕ್ಕೆ ಬಸ್ ನಿಲ್ದಾಣ ಸ್ಥಳಾಂತರಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಅಧಿಕಾರಿಯಾದ ಲಕ್ಷ್ಮೀಕಾಂತ್ ಬಿ.ನಾಲವಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೈಟ್ ಎಂಜಿನಿಯರ್ ನಿಖಲ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್, ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್, ಜಿಲ್ಲಾ-ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಕಿಡಿ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ವಿಳಂಬದ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರದಲ್ಲಿಯೇ ಕಾಮಗಾರಿ ವಿಳಂಬ ಆಗಿರುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ಬಾಕಿ ಇರುವ ಗೌರಿಬಿದನೂರು-ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ-234 ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದರು.
ಹಾಗೆಯೇ ಪರಿಸರ ಸಂರಕ್ಷಣೆಗಾಗಿ ತೋಟಗಾರಿಕೆ ಇಲಾಖೆಯಿಂದ ಸಸಿ ಪಡೆದು ರಸ್ತೆಯ ಬದಿಗಳಲ್ಲಿ ಸಸಿ ನೆಟ್ಟು ಹಾರೈಕೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ, ಜಿಲ್ಲೆಯ ಪ್ರಮುಖ ರಸ್ತೆ ಸೇರಿದಂತೆ ಎಲ್ಲಾ ಕಡೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.