ಭಾಲ್ಕಿ: ದೇಶದ ಪ್ರಗತಿಯ ದೃಷ್ಟಿಯಿಂದ ಮತ್ತು ಸೃಜನಾತ್ಮ ಕಲಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಸಂಶೋಧನಾತ್ಮಕ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾ ಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ತಳವಾಡ (ಕೆ) ಗ್ರಾಮದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಬಿಎಸ್‌ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶ ಪ್ರಪಂಚದಲ್ಲಿಯೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲು ವಿಜ್ಞಾನ ಕ್ಷೇತ್ರದಲ್ಲಿ ನಿತ್ಯ ನೂತನ ಆವಿಷ್ಕಾರ, ಸಂಶೋಧನೆ ನಡೆಯುವುದು ಅಗತ್ಯ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ನೌಕರಿಗಾಗಿ ಪಡೆಯದೇ ರಾಷ್ಟ್ರದ ಭವ್ಯ ಭವಿಷ್ಯವನ್ನು ರೂಪಿಸಲು ಪಡೆಯಬೇಕಿದೆ. ಕೃಷಿ ಕೈಗಾರಿಕೆ ಸೇರಿದಂತೆ ಇತರ ಕ್ಷೇತ್ರಗಳ ಬೆಳವಣಿಗೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ನಡೆಯುವುದು ಬಹಳ ಅವಶ್ಯ ಆಗಿದೆ. ತಂತ್ರಜ್ಞಾನದ ಬೆಳವಣಿಗೆ ದೇಶವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿ ಬೆಳೆಸುತ್ತದೆ. ಕೌಶಲಾತ್ಮಕ, ವೈಜ್ಞಾನಿಕ ಕಲಿಕೆ ತಮ್ಮದಾಗಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ| ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಲ ನ್ಯಾಯ ಮಂಡಳಿ ಅಧ್ಯಕ್ಷ ಶಶಿಧರ ಕೊಸಂಬೆ, ಪ್ರೊ| ಸಿ.ವಿ. ರೆಡ್ಡಿ ಮಾತನಾಡಿದರು. ಉಪನ್ಯಾಸಕ ಸುಭಾಷ ನೇಳಗೆ, ಬಾಲಾಜಿ, ಮಲ್ಲಿಕಾರ್ಜುನ, ಅಜಯ್, ಅಕ್ಮನಾಗಮ್ಮ, ಸಂಗಮೇಶ ಇದ್ದರು. ವಿಶ್ವಾ ವಳಂಡೆ ಸ್ವಾಗತಿಸಿದರು. ಕಲ್ಯಾಣಿ ಬಾವುಗೆ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.