Advertisement
“ನಾವೀನ್ಯತೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ’ಯು 2021-22ನೇ ಸಾಲಿನ ಮುಂಗಡ ಪತ್ರದ ಆರು ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದವರು ಹೇಳಿದರು. 2019ರ ಜುಲೈನಲ್ಲಿ ಸಂಸತ್‌ನಲ್ಲಿ ಮಂಡಿಸಲಾಗಿದ್ದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ರಾಷ್ಟ್ರೀಯ ಸಂಶೋಧನ ಪ್ರತಿಷ್ಠಾನ(ಎನ್‌ಆರ್‌ಎಫ್)ದ ಕಾರ್ಯವಿಧಾನವನ್ನು ಅಂತಿಮಗೊಳಿಸಲಾಗಿದೆ. ಎನ್‌ಆರ್‌ಎಫ್ಗೆ 50,000 ಕೋ. ರೂ. ಅನುದಾನವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು ಇದನ್ನು ಮುಂದಿನ ಐದು ವರ್ಷಗಳಲ್ಲಿ ವ್ಯಯಿಸಲು ಉದ್ದೇಶಿಸಲಾಗಿದೆ. ದೇಶದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗುವುದು ಎಂದರು.
ಬಜೆಟ್‌ನಲ್ಲಿ ರಾಷ್ಟ್ರೀಯ ಭಾಷಾ ಅನುವಾದ ಮಿಷನ್(ಎನ್‌ಎಲ್‌ಟಿಎಂ)ಅನ್ನು ಪ್ರಕಟಿಸಲಾಗಿದೆ. ಈ ಯೋಜನೆಯ ಮೂಲಕ ದೇಶದ ಪ್ರಮುಖ ಭಾಷೆಗಳಲ್ಲಿ ಸರಕಾರ ನೀತಿ-ನಿರ್ಧಾರಗಳು ಮತ್ತು ಆಡಳಿತದ ಕುರಿತ ಮಾಹಿತಿಗಳು ಸಾರ್ವಜನಿಕರಿಗೆ ಅಂತರ್ಜಾಲದಲ್ಲಿ ಲಭ್ಯವಾಗಲಿದೆ. ಆಳ ಸಾಗರ ಸಂಶೋಧನೆ
ಆಳ ಸಮುದ್ರದಲ್ಲಿನ ಸಂಶೋಧನೆ ಮತ್ತು ಅನ್ವೇಷಣೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ 4,000ಕೋ. ರೂ.ಗಳನ್ನು ವ್ಯಯಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ಸಾಗರದಲ್ಲಿನ ಜೀವವೈವಿಧ್ಯ ಸಂರಕ್ಷಣೆಯ ಉದ್ದೇಶದೊಂದಿಗೆ ಆಳ ಸಮುದ್ರ ಸಂಶೋಧನೆ ಮತ್ತು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.