Advertisement

Cesarean deliveries: ಸಿಸೇರಿಯನ್‌ ಹೆರಿಗೆಗಳ ಕಡಿವಾಣಕ್ಕೆ ಒತ್ತು

03:21 PM Aug 29, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಹಜ ಹೆರಿಗೆ ವಿಧಾನಗಳಿಗಿಂತ ಸಿಸೇರಿಯನ್‌ ಹೆರಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ಸಿಸೇರಿಯನ್‌ ಹೆರಿಗೆಗಳು ಹೆಚ್ಚಾಗಲು ಆರೋಗ್ಯ ಕ್ಷೇತ್ರ ಒಂದು ಉದ್ಯಮ ಕ್ಷೇತ್ರವಾಗಿ ಬದಲಾವಣೆಯಾಗುತ್ತಿರುವುದು ಹಾಗೂ ಅಸಾಧಾರಣವಾದ ಹೆರಿಗೆ ನೋವಿಗೆ ಹೆದರಿ ಸಿಸೇರಿಯನ್‌ಗಳತ್ತ ಮುಖ ಮಾಡುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಸಿ-ಸೆಕ್ಷನ್‌ ಹೆರಿಗೆ ಹೆಚ್ಚಾಗಿ ವರದಿಯಾಗುತ್ತಿದೆ. ಇಂತಹ ಪ್ರಕರಣಗಳನ್ನು ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ನಿಯಂತ್ರಿಸಿ ಸಹಜ ಹೆರಿಗೆ ಪ್ರೋತ್ಸಾಹಿಸಲು ಆರೋಗ್ಯ ಇಲಾಖೆ  ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಮಿಡ್‌ ವೈಫ‌ರಿ ಇನ್ಷಿಯೇಟಿವ್‌: ಸಹಜ ಹೆರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಿಡ್‌ ವೈಫ‌ರಿ ಇನ್ಷಿಯೇಟಿವ್‌ ಯೋಜನೆಯನ್ನು  ಜನವರಿನಲ್ಲಿ ಜಾರಿಗೊಳಿಸಿದೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ 18 ತಿಂಗಳ ತರಬೇತಿಯನ್ನು ಶುಶ್ರೂಷಾಧಿಕಾರಿಗಳಿಗೆ ಆರಂಭಿಸಲಾಗಿದೆ. ಈ ವೇಳೆ ಗರ್ಭಾವಸ್ಥೆಯ ಮಧುಮೇಹ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ, ಸಹಜ ಹೆರಿಗೆ ಕ್ರಮಗಳು ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜತೆಗೆ ಇಲಾಖೆಯಿಂದ ಪ್ರಸೂತಿ ತಜ್ಞರಿಗೆ ಅವಶ್ಯಕ ಸಂದರ್ಭ ಹೊರತುಪಡಿಸಿ ಉಳಿದ ಸಮಯ ಸಹಜ ಹೆರಿಗೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ತರಬೇತಿ ನೀಡಲಾಗುತ್ತಿದೆ.

ದಕ್ಷತಾ ತರಬೇತಿ: ಸಾಮಾನ್ಯವಾಗಿ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಕೆಳಹಂತದ ಆಸ್ಪತ್ರೆಗಳಲ್ಲಿ ಹೆರಿಗೆ ಅಲ್ಪ ಪ್ರಮಾಣದಲ್ಲಿ ಕ್ಲಿಷ್ಟಕರವಾಗಿ ಕಾಣಿಸಿಕೊಂಡರೆ ನೇರವಾಗಿ ಮೇಲ್ದರ್ಜೆ ಆಸ್ಪತ್ರೆಗಳಿಗೆ ಸಿ- ಸೆಕ್ಷನ್‌ಗೆ ಶಿಫಾರಸು ಮಾಡುತ್ತಾರೆ. ಇದನ್ನು ತಗ್ಗಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಸಹಜ ಹೆರಿಗೆ ಪ್ರಯತ್ನಿಸಲು ಸ್ತ್ರೀ ರೋಗ ತಜ್ಞರಿಗೆ ದಕ್‌Ò ಮತ್ತು ಹಾಗೂ ಶುಶ್ರೂಷಾಧಿಕಾರಿಗಳಿಗೆ ದಕ್ಷತಾ ತರಬೇತಿ ನೀಡಲಾಗುತ್ತಿದೆ.

ಮೌಲ್ಯಮಾಪನ, ಪ್ರೋತ್ಸಾಹ ಧನ:  ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಪ್ರೋತ್ಸಾಹಿಸಲು ರಾಷ್ಟ್ರೀಯ ಆರೋಗ್ಯ ಮಿಷನ್‌ ಲಕ್ಷ್ಯ ಯೋಜನೆಯಡಿ ಹೊರ ರಾಜ್ಯದ ಮೌಲ್ಯ ಮಾಪಕರನ್ನು ಬಳಸಿಕೊಂಡು ಆಸ್ಪತ್ರೆಯ ಮೌಲ್ಯಮಾಪನ ಮಾಡಲಾಗುತ್ತಿದೆ. ಈ ಮೌಲ್ಯಮಾಪನದಲ್ಲಿ ತೇರ್ಗಡೆಗೊಂಡ ಆಸ್ಪತ್ರೆಗೆ ಪ್ರೋತ್ಸಾಹ ಧನ ಘೋಷಿಸಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ 6 ಲಕ್ಷ ರೂ., ಜಿಲ್ಲಾಸ್ಪತ್ರೆಗೆ 3 ಲಕ್ಷ ರೂ., ತಾಲೂಕು 2 ಲಕ್ಷ ರೂ., ಸುಮುದಾಯ ಆರೋಗ್ಯ ಕೇಂದ್ರದಕ್ಕೆ 2 ಲಕ್ಷ ರೂ.ವನ್ನು ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿ ಅಭಿವೃದ್ಧಿಗೆ ಕ್ರಮವಾಗಿ ಪ್ರೋತ್ಸಾಹ ಧನ ಸಿಗಲಿದೆ.

Advertisement

ಸಹಜ ಹೆರಿಗೆ ಉತ್ತಮ: ಗರ್ಭಿಣಿಯರಿಗೆ ರಕ್ತದೊತ್ತಡ, ಮಧುಮೇಹ ಸಹಿತ ವಿವಿಧ ಕಾಯಿಲೆಗಳಿದ್ದರೆ, ಅವಳಿ ಶಿಶುಗಳಿದ್ದರೆ ಹೆಚ್ಚು ಅಪಾಯ ಆಹ್ವಾನಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಸಿಸೇರಿಯನ್‌ ಶಿಫಾರಸು ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಮಾಣ ಶೇ. 10 ರಿಂದ ಶೇ.12 ಇರುತ್ತದೆ. ಇನ್ನೂ ನಿಗದಿತ ಸಮಯಕ್ಕೆ ಹೆರಿಗೆ ಆಗದಿದ್ದರೆ, ಆಸ್ಪತ್ರೆಗೆ ಬರುವುದು ತಡವಾಗಿದ್ದರೆ, ಮಗುವಿನ ಆರೋಗ್ಯದಲ್ಲಿ ಏರುಪೇರುಗಳಿದ್ದರೆ ಸಿಸೇರಿಯನ್‌ ಮೊರೆ ಹೋಗಬೇಕಾಗುತ್ತದೆ ಎಂದು ಪ್ರಸೂತಿ ತಜ್ಞೆ ಸೌಭಾಗ್ಯ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.45 ಸಿಸೇರಿಯನ್‌ :

ರಾಜ್ಯದಲ್ಲಿ 2020ರಿಂದ 23ರ ವರೆಗೆ ಒಟ್ಟು 23 ಲಕ್ಷ ಹೆರಿಗೆಗಳಾಗಿವೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 11 ಲಕ್ಷ ಸಹಜ ಹಾಗೂ 4 ಲಕ್ಷ ಸಿಜೇರಿಯನ್‌  ಹೆರಿಗೆಗಳಾಗಿವೆ. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ 6 ಲಕ್ಷ ಸಹಜ ಹಾಗೂ 4.57 ಲಕ್ಷ ಸಿಸೇರಿಯನ್‌ನ್‌ ಹೆರಿಗೆಯಾಗಿದೆ. 2022-23ನೇ ಅವಧಿಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿನ ಒಟ್ಟು ಹೆರಿಗೆಯಲ್ಲಿ ಶೇ.29 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶೇ.45 ಸಿ -ಸೆಕ್ಷನ್‌ ಹೆರಿಗೆ ಆಗಿವೆ.

ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಮಿಡ್‌ ವೈಫ‌ರಿ ಇನ್ಷಿಯೇಟಿವ್‌ ಯೋಜನೆ ಮೂಲಕ ಸಹಜ ಹೆರಿಗೆ ಉತ್ತೇಜಿಸಲಾಗುತ್ತಿದೆ. ಪ್ರಯೋಗಿಕವಾಗಿ ಬೆಂಗಳೂರಿನ ವಾಣಿ ವಿಲಾಸದಲ್ಲಿ ತರಬೇತಿ ಪ್ರಾರಂಭಗೊಂಡಿದೆ. ಸ್ತ್ರೀ ರೋಗ ತಜ್ಞರಿಗೆ ಹಾಗೂ ಶುಶ್ರೂಷಾಧಿಕಾರಿಗಳಿಗೆ ದಕ್‌Ò ಮತ್ತು ದಕ್ಷತಾ ತರಬೇತಿ ನೀಡಲಾಗುತ್ತಿದೆ. –ಡಾ. ರಂದೀಪ್‌, ಆಯುಕ್ತರು, ಆರೋಗ್ಯ ಇಲಾಖೆ 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next