Advertisement

ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ

11:29 AM May 08, 2022 | Team Udayavani |

ಮುಧೋಳ: ಒಂದೆಡೆ ನೆಲೆ ನಿಂತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ದಕ್ಕಲಿಗ ಸಮುದಾಯದ ಜನರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಉತ್ತರ ಕರ್ನಾಟಕ ಭಾಗದ ದಕ್ಕಲಿಗ ಸಮುದಾಯದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ದಕ್ಕಲಿಗ ಸಮುದಾಯದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ನಿರ್ಮಾಣಗೊಂಡಿರುವ ಹಲವಾರು ವಸತಿ ನಿಲಯಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಎಲ್ಲ ದಕ್ಕಲಿಗ ಸಮುದಾಯದವರಿಗೆ ಮುಧೋಳ ಮತಕ್ಷೇತ್ರದ ಲೋಕಾಪುರ ಭಾಗದಲ್ಲಿ ಮನೆ ನಿರ್ಮಿಸಿಕೊಡಲು ಸಿದ್ಧನಿದ್ದೇನೆ. ಈ ಭಾಗದಲ್ಲಿ ಬರುವಿರಾ ಎಂದು ದಕ್ಕಲಿಗ ಸಮುದಾಯದವರನ್ನು ಕೇಳಿದಾಗ ಅವರು ಬೇಡ ನಮ್ಮ ನಮ್ಮ ಮೂಲಸ್ಥಾನದಲ್ಲಿಯೇ ನಮಗೆ ಸೌಲಭ್ಯ ಕಲ್ಪಿಸಿ ಎಂದು ಕೇಳಿಕೊಂಡರು.

ಆಗ ಕಾರಜೋಳರು ಆಗಲಿ ಎಂದರು. ದಕ್ಕಲಿಗರ ಮನೆ ನಿರ್ಮಾಣಕ್ಕೆ ರಾಜೀವ ಗಾಂಧಿ ಆವಾಸ್‌ ಯೋಜನೆ ಬದಲಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ನೇರವಾಗಿ ಹಣ ಬಿಡುಗಡೆ ಮಾಡಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ದಕ್ಕಲಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗಕ್ಕೆ ಸಾಲ, ಜಮೀನು ಖರೀದಿಸಲು ಸರ್ಕಾರದಿಂದ ಸಹಾಯಧನ ಸಮರ್ಪಕವಾಗಿ ಹಂಚಿಕೆಯಾಗಲಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

Advertisement

ಬೆಳಗಾವಿ ಜಿಲ್ಲೆಯ ಮೂಡಲಗಿ ಭಾಗದ ದಕ್ಕಲಿಗ ಸಮುದಾಯದವರು ಮಾತನಾಡಿ, ನಮಗೆ ಸ್ವಂತ ಮನೆಗಳಿಲ್ಲ, ನಿವೇಶನವೂ ಇಲ್ಲ ಎಂದು ತಮ್ಮ ಕಷ್ಟ ತೋಡಿಕೊಂಡರು. ತಕ್ಷಣವೇ ಸಂಬಂಧಿ ಸಿದ ಅಧಿ ಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಕಾರಜೋಳ ಕಂಕನವಾಡಿಯಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಮುದಗಲ್ಲಿನಿಂದ ಆಗಮಿಸಿದ್ದ ಭೀಮಸಿ ಎಂಬುವರು, ನಮ್ಮ ಭಾಗದಲ್ಲಿ ಮಾದಿಗರು ನಮಗಿಂತ ಬಹುಸಂಖ್ಯಾತರಾಗಿದ್ದು, ನಮ್ಮ ಮೇಲೆ ನಿತ್ಯ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ವೇಳೆ ರಾಯಚೂರು ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಕಾರಜೋಳ ಘಟನೆ ಬಗ್ಗೆ ವಿಚಾರಣೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತ ವಾದಿರಾಜ ಮಾತನಾಡಿ, ದಕ್ಕಲಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜನರು ಅವುಗಳ ಸದುಪಯೋಗಪಡಿಸಿಕೊಂಡು ಸಮಾ ಜದ ಮುನ್ನೆಲೆಗೆ ಬರಬೇಕು ಎಂದು ಹೇಳಿದರು.

ದಕ್ಕಲಿಕ ಸಮುದಾಯದ ರಾಜ್ಯಮಟ್ಟದ ನೋಡಲ್‌ ಅಧಿಕಾರಿ ನಟರಾಜ ಮಾತನಾಡಿ, ರಾಜ್ಯದ ದಕ್ಕಲಿಗ ಸಮುದಾಯದ 106 ಕುಟುಂಬಗಳಿಗೆ ಮನೆಗಳು ಮಂಜೂರಾಗಿವೆ. ಇನ್ನೂ 200ಕ್ಕೂ ಹೆಚ್ಚು ಕುಟುಂಬ ಗಳಿಗೆ ಮನೆ ಮಂಜೂರಾತಿಯಾಗಬೇಕಿದೆ ಎಂದರು.

ಆದಿಜಾಂಭವ ಅಭಿವೃದ್ಧಿ ನಿಗಮದ ಅಧಿಕಾರಿ, ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ತಹಶೀಲ್ದಾರ್‌ ಮಹೇಶ ಪಾಂಡವ, ತಾಲೂಕು ಪಂಚಾಯಿತಿ ಇಒ ಕಿರಣ ಘೋರ್ಪಡೆ, ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ, ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಕೆ.ಆರ್‌. ಮಾಚಪ್ಪನವರ ಇದ್ದರು. ಬೀದರ, ರಾಯಚೂರು, ಬಾಗಲಕೋಟೆ, ಬೆಳಗಾವಿ ಭಾಗದ ದಕ್ಕಲಿಗ ಸಮುದಾಯದ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next