Advertisement

ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆಗೆ ಒತ್ತು

05:22 PM Jun 06, 2022 | Team Udayavani |

ಬೀದರ: ರಾಜ್ಯದಲ್ಲಿ ಹಸಿರು ಇಂಧನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, 2027ರ ಹೊತ್ತಿಗೆ ನವೀಕರಿಸಬಹುದಾದ ಇಂಧನದ ಮೂಲಗಳಿಂದ 10 ಮೆಗಾವ್ಯಾಟ್‌ ಇಂಧನದ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ರಾಜ್ಯದ ವಿವಿಧೆಡೆ ಹೈಬ್ರಿಡ್‌ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನೀಲಕುಮಾರ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ “ಘರ್‌ ಕೆ ಊಪರ್‌ ಸೋಲಾರ್‌ ಈಸ್‌ ಸೂಪರ್‌’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ “ಸೋಲಾರ್‌ ಜಾಗೃತಿ ಅಭಿಯಾನ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಪ್ರಧಾನಿಗಳ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಿಂದ ನೀಡಬೇಕಾದ ಕೊಡುಗೆ ಕುರಿತು ಚರ್ಚಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ 30 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಈ ಪೈಕಿ ಶೇ.50ರಷ್ಟು ವಿದ್ಯುತ್‌ ಹಸಿರು ಇಂಧನ ಸೇರಿದೆ. 7,500 ಮೆಗಾ ವ್ಯಾಟ್‌ ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 17 ಸಾವಿರ ಮೆಗಾ ವ್ಯಾಟ್‌ಗೆ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದ ಸಚಿವರು, ಮುಂದಿನ ಭವಿಷ್ಯ ಸೋಲಾರ್‌ ಮೇಲೆಯೇ ಇದ್ದು, ಸೋಲಾರ್‌ ಮೇಲೆ ಹೆಚ್ಚು ಅವಲಂಬಿತರಾಗಬೇಕಿದೆ. ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ಬೇಕಾಗುವಷ್ಟು ಹಸಿರು ಇಂಧನವನ್ನು ಉತ್ಪಾದನೆ ಮಾಡಿಕೊಂಡರೆ ವಿದ್ಯುತ್‌ ಬಿಲ್‌ ಪಾವತಿಸುವುದು ತಪ್ಪಲಿದೆ ಮತ್ತು ವಿದ್ಯುತ್‌ ಕಂಪನಿಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಸೋಲಾರ್‌ಗಾಗಿ ಸರ್ಕಾರದ ರಿಯಾಯಿತಿ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದರು.

ಮುಂದಿನ ವರ್ಷಗಳಲ್ಲಿ ಎಲೆಕ್ಟ್ರಿಕಲ್‌ ಮತ್ತು ಹೈಡ್ರೋಜನ್‌ ಚಾಲಿತ ವಾಹನಗಳ ಬಳಕೆ ಹೆಚ್ಚಾಗಲಿದ್ದು, ಇಂಧನ ಇಲಾಖೆ ಅಗತ್ಯ ಮೂಲ ಸೌಕರ್ಯಗಳಿಗೆ ಕೈಜೋಡಿಸಲಿದೆ. ಈಗಾಗಲೇ ಚಾಜಿಂìಗ್‌ ಸೆಂಟರ್‌ ನಿರ್ಮಾಣ ಮಾಡಲು ಶುರು ಮಾಡಿದ್ದೇವೆ. ಜಿಲ್ಲಾ, ಪ್ರವಾಸಿ ಕೇಂದ್ರಗಳಲ್ಲಿ ಚಾಜಿಂìಗ್‌ ಸೆಂಟರ್‌ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

Advertisement

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಶಾಸಕ ರಹೀಮ್‌ ಖಾನ್‌, ಸುನೀಲಕುಮಾರ ಜಿ. ಅವರು ಮನೆಯ ಮೇಲ್ಛಾವಣಿ ಮೇಲೆ ಸೋಲಾರ್‌ ಘಟಕ ಕುರಿತು ಮಾತನಾಡಿದರು.

ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಧಿಕಾರಿ ಗೋವಿಂದ ರೆಡ್ಡಿ, ಎಸ್‌ಪಿ ಕಿಶೋರಬಾಬು, ಜಿಪಂ ಸಿಇಒ ಜಹೀರಾ ನಸೀಮ್‌ ಇದ್ದರು. ಚನ್ನಬಸವ ಹೇಡೆ ನಿರೂಪಿಸಿದರು.

100 ಪಟ್ಟಣಗಳಲ್ಲಿ ಜಾಗೃತಿ: ದೇಶದ 100 ಪಟ್ಟಣಗಳಲ್ಲಿಮನೆ ಮೇಲ್ಛಾವಣಿ ಮೇಲೆ ಸೋಲಾರ್‌ನಿಂದ ವಿದ್ಯುತ್‌ ಉತ್ಪಾದನೆ ಮಾಡುವ ತಂತ್ರಜ್ಞಾನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಸೋಲಾರ್‌ ಜಾಗೃತಿ ಅಭಿಯಾನ ಬೀದರನಿಂದ ಆರಂಭವಾಗಿದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ರಂಗ ಮಂದಿರದಲ್ಲಿ ಜರುಗಿದ ಸೋಲಾರ್‌ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಂಟು ವರ್ಷಗಳಲ್ಲಿ ಭಾರತ ಪರ್ಯಾಯ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಭಾರತ 2030ರವರೆಗೆ 500 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಳ ಜತೆಗೆ ಜಾಗತಿಕ ತಾಪಮಾನ ಕಡಿಮೆ ಮಾಡಲು ಸಹ ಸಾಧ್ಯವಾಗಲಿದೆ ಎಂದರು.

ಎಲ್ಲರೂ ಮನೆಗಳ ಮೇಲೆ ಸೋಲಾರ್‌ ಘಟಕ ಅಳವಡಿಸಿ ವಿದ್ಯುತ್‌ ಉಚಿತವಾಗಿ ಬಳಸಿ ವಿದ್ಯುತ್‌ ಕಂಪನಿಗಳಿಗೂ ಮಾರಾಟ ಮಾಡಬಹುದಾಗಿದೆ. ಗ್ರಾಹಕರು ಯಾವುದೇ ಕಂಪನಿಯ ಉಪಕರಣ ಬಳಸಬಹುದು. ಸೋಲಾರ್‌ ಘಟಕ ಅಳವಡಿಸಿಕೊಂಡರೆ 5ರಿಂದ 7 ವರ್ಷಗಳ ಅವಧಿಯಲ್ಲೇ ಅದರ ರಿಟರ್ನ್ ಪಡೆಯಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next