Advertisement

ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚಿಸಲು ಒತ್ತು

11:14 AM Aug 01, 2020 | mahesh |

ಬೆಂಗಳೂರು: ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯಮ ನೆಲೆಗೊಂಡು ಆ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮವು ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು 34 ಕೋಟಿ ರೂ. ವೆಚ್ಚದಲ್ಲಿ ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ
ನಿರ್ಮಿಸಿರುವ ಸುಸಜ್ಜಿತ ಐಟಿ-ಬಿಟಿ ಸ್ಟಾರ್ಟ್‌ಅಪ್‌ ಹಾಗೂ ಇನ್ಕ್ಯುಬೇಷನ್‌ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವ ದರ್ಜೆಯ ಮೂಲ ಸೌಕರ್ಯ ಒದಗಿಸಲು ಕಿಯೋನಿಕ್ಸ್‌ ಸಂಸ್ಥೆ ಶ್ರಮಿಸುತ್ತಿದರುವುದು ಶ್ಲಾಘನೀಯ. ಕಿಯೋನಿಕ್ಸ್‌ ಸಂಸ್ಥೆ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ, ತರಬೇತಿ ಒದಗಿಸುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ನಿರುದ್ಯೋಗಿ ವಿದ್ಯಾವಂತರಿಗೆ
ಉದ್ಯೋಗ ಪಡೆಯಲು ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌ ಇತರೆ ತರಬೇತಿ ನೀಡಿ ಕೌಶಲ್ಯ ಹೆಚ್ಚಿಸಲು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಂಸ್ಥೆಯ ಮೂಲಕ 10,000 ಉದ್ಯೋಗಾಕಾಂಕ್ಷಿಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶ ಒದಗಿಸಲಾಗಿದ್ದು, ವಿವಿಧ ಸರ್ಕಾರಿ ಇಲಾಖೆ,
ನಿಗಮ, ಮಂಡಳಿಗಳಿಗೆ ನಿಯೋಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಉದ್ಯಮದ ವಿಸ್ತರಣೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ರಾಜ್ಯದ ದ್ವಿತೀಯ ಶ್ರೇಣಿಯ
ನಗರಗಳಲ್ಲಿ ಸರ್ಕಾರದ ಸಹಯೋಗದಲ್ಲಿ ಐಟಿ ಪಾರ್ಕ್‌ ಗಳನ್ನು ಸ್ಥಾಪಿಸಲು ಕಿಯೋನಿಕ್ಸ್‌ ಸಂಸ್ಥೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು
ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ಉದ್ಯಮಗಳು, ಐಟಿ ಬೆಳವಣಿಗೆಗೆ ಸಹಾಯವಾಗುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುವುದು ಶ್ಲಾಘನೀಯ. ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಬೆಳೆವಣಿಗೆಯ ಗತಿಯನ್ನು ಉಳಿಸಿಕೊಳ್ಳಲು ಹಾಗೂ ಮಾಹಿತಿ ತಂತ್ರಜ್ಞಾನ ಸೇವೆ
ಒದಗಿಸಲು ಈ ಕೇಂದ್ರ ಸದುಪಯೋಗವಾಗಲಿ ಎಂದು ಆಶಿಸಿದರು.

ಇದೇ ವೇಳೆ ಕೇಂದ್ರದ ಪಕ್ಕದಲ್ಲೇ ಇರುವ ಬಿಡಿಎ ಜಾಗವನ್ನು ಕಿಯೋನಿಕ್ಸ್‌ ಸಂಸ್ಥೆಗೆ ನೀಡಬೇಕೆಂಬ ಶಾಸಕ ಎಂ.ಸತೀಶ್‌ ರೆಡ್ಡಿ ಅವರ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಶುಕ್ರವಾರ ಸೇವೆಯಿಂದ ನಿವೃತ್ತರಾದ ಕಿಯೋನಿಕ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್‌. ಸುರೇಶ್‌ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಸಂಸದ ತೇಜಸ್ವಿ ಸೂರ್ಯ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ
ಬಂಟ್ವಾಳ, ಕಿಯೋನಿಕ್ಸ್‌ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement

ಡಿಜಿಟಲ್‌ ಎಕಾನಮಿ ಮಿಷನ್‌
ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ನವೋದ್ಯಮಗಳ ವೇಗ ವೃದ್ಧಿ ಜತೆಗೆ ಅವು ದೇಶ-ವಿದೇಶದ ಮಾರುಕಟ್ಟೆ ಪ್ರವೇಶಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಡಿಜಿಟಲ್‌ ಎಕಾನಮಿ ಮಿಷನ್‌ ಸಂಸ್ಥೆಯನ್ನು ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು
ಎಂದು ಹೇಳಿದರು. ಇದರಲ್ಲಿ ಉದ್ಯಮ ಕ್ಷೇತ್ರದಿಂದ ಶೇ.51 ಹಾಗೂ ಸರ್ಕಾರದಿಂದ ಶೇ. 49ರಷ್ಟು ಸಹಭಾಗಿತ್ವವಿರಲಿದೆ. ಎಲ್ಲ ರೀತಿಯ ನಾವೀನ್ಯತಾ ಚಟುವಟಿಕೆಗಳನ್ನು ಕ್ರೋಢೀಕರಿಸಿ ಸಂಯೋಜಿಸಲು ಮತ್ತು ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಸಂಸ್ಥೆ ಸಹಕಾರಿಯಾಗಲಿದೆ. ಇನ್‌ವೆಸ್ಟ್‌ ಕರ್ನಾಟಕದ
ಕಚೇರಿಯನ್ನೂ ಇದೇ ಕಿಯೋನಿಕ್ಸ್‌ ಕಟ್ಟಡದಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು. ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಮಾರುಕಟ್ಟೆಯಲ್ಲಿ ಕರ್ನಾಟಕ ಮೂರನೇ ಒಂದರಷ್ಟು ಪಾಲು ಹೊಂದಿದೆ. ರಫ್ತು ವಹಿವಾಟು ಸದ್ಯಕ್ಕೆ 52 ಬಿಲಿಯನ್‌ ಡಾಲರ್‌ನಷ್ಟಿದ್ದು, ಇನ್ನು ಐದು ವರ್ಷದಲ್ಲಿ ರಫ್ತು ವಹಿವಾಟು ಪ್ರಮಾಣವನ್ನು 150 ರಿಂದ
200 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸಲು ಎಲ್ಲ ಪ್ರಯತ್ನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next