Advertisement

ಅಪರಾಧ ಪತ್ತೆಗೆ ಡಿಜಿಟಲ್‌ ಸಾಕ್ಷ್ಯಗಳಿಗೆ ಒತ್ತು

11:17 AM Dec 02, 2022 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳ್ಳತನ, ಸುಲಿಗೆ, ಡಕಾಯಿತಿ, ಕೊಲೆ, ಅತ್ಯಾಚಾರ, ಹಲ್ಲೆ ಸೇರಿ ವಿವಿಧ ಅಪರಾಧ ಪ್ರಕರಣಗಳ ಸಾಕ್ಷ್ಯ ಸಂಗ್ರಹಿಸುವ ವಿಧಾನಗಳನ್ನು ಪೊಲೀಸರು ಮಾರ್ಪಾಡು ಮಾಡಿ ಕೊಂಡಿದ್ದು, ಡಿಜಿಟಲ್‌ ಸಾಕ್ಷ್ಯಗಳಿಗೆ ಒತ್ತು ನೀಡುವ ಮೂಲಕ ಹೊಸ ಮಾದರಿಯ ಅಪರಾಧ ಪ್ರಕರಣ ಗಳಿಗೆ ಕಡಿವಾಣ ಹಾಕಲು ಸನ್ನದ್ಧರಾಗಿದ್ದಾರೆ.

Advertisement

ಪ್ರತಿ ಅಪರಾಧ ಪ್ರಕರಣ ನಡೆದ ಪ್ರದೇಶದ ಸಮೀಪದಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯ, ಟವರ್‌ ಲೊಕೇಶನ್‌ ಮೂಲಕ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಕಾರ್ಯನಿರ್ವಹಿಸುತ್ತಿದ್ದ ವಿವರ ಸೇರಿ ಮಹತ್ವದ ಡಿಜಿಟಲ್‌ ಸಾಕ್ಷ್ಯಗಳನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳ ಫಿಂಗರ್‌ ಪ್ರಿಂಟ್‌ ಕಲೆ ಹಾಕಿಯೇ ತನಿಖೆ ಮುಂದುವರಿಸಲಾಗುತ್ತಿದೆ. ಶೇ.90ರಷ್ಟು ಪ್ರಕರಣ ಗಳಲ್ಲಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್‌ ಶೀಟ್‌ಗಳಲ್ಲಿ ಎಳೆ-ಎಳೆಯಾಗಿ ಉಲ್ಲೇ ಖೀಸಲಾಗುತ್ತಿದೆ. ಹೊಸ ಮಾದರಿಯ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ನೂತನ ತಂತ್ರಜ್ಞಾನ ಬಳಸಿಕೊಂಡು ಕಾರ್ಯ ಪ್ರವೃತ್ತರಾಗಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಅಪರಾಧ ಪ್ರಕರಣ ಮಿತಿ ಮೀರಿ ಹೋದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾ ರವು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯ ಸಂಗ್ರಹಿಸಿ ಶಿಕ್ಷೆಯಾಗುವಂತೆ ನಿಗಾ ವಹಿಸಲು ಖಡಕ್‌ ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ಈ ಹೊಸ ನಿಯಮ ಜಾರಿಗೆ ತರಲಾಗಿದೆ.

ಚಾರ್ಜ್‌ಶೀಟ್‌ ಸಲ್ಲಿಸಿ ಕೋರ್ಟ್‌ನಲ್ಲಿ ವಿಚಾ ರಣೆ ನಡೆಯುವ ವೇಳೆ ಸಾಕ್ಷಿದಾರರಿಗೆ ಸಾಕ್ಷ್ಯ ನುಡಿಯುವ ಬಗ್ಗೆ ಪುನರ್‌ ಮನನ ಮಾಡಲಾಗುತ್ತಿದೆ. ಎಎಸ್‌ಐ ನೇತೃತ್ವದಲ್ಲಿ ಕೋರ್ಟ್‌ ಮಾನಿಟರಿಂಗ್‌ ಸೆಲ್‌ ತಂಡ ರಚಿಸಿ ಪ್ರತಿ ದಿನ ಇವರನ್ನು ಕರ್ತವ್ಯಕ್ಕೆ ನೇಮಿಸಿ ಕೋರ್ಟ್‌ಗೆ ಕಳುಹಿಸಿಕೊಡಲಾಗುತ್ತಿದೆ. ಇವರು ಪ್ರಕರಣದ ಉಸ್ತುವಾರಿ ನೋಡಿ ಕೊಂಡು ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯ ನುಡಿಯುವ ಬಗ್ಗೆ ಸರ್ಕಾರಿ ಅಭಿಯೋಜಕರ ಮೂಲಕ ಸಾಕ್ಷಿದಾರರಿಗೆ ಮಾರ್ಗದರ್ಶನ ನೀಡು ತ್ತಾರೆ. ಈ ಬೆಳೆವಣಿಗೆಯಿಂದ 2019ರಲ್ಲಿ ಕೋರ್ಟ್‌ನಲ್ಲಿ ಶಿಕ್ಷೆಯಾಗಿದ್ದ ಶೇ.60.85ರ ಪ್ರಮಾಣ 2022 ವೇಳೆಗೆ ಶೇ.84.7ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಡಿಜಿಟಲ್‌ ಸಾಕ್ಷ್ಯಗಳಿಗೆ ಹೆಚ್ಚಿನ ಒತ್ತು ನೀಡದೇ ಪ್ರತ್ಯಕ್ಷದರ್ಶಿಗಳಿಗೆ ಕೋರ್ಟ್‌ಗೆ ಬಂದು ಸಾಕ್ಷ್ಯ ನುಡಿಯುವಂತೆ ಹೇಳಿ ಪೊಲೀಸರು ಕೈ ಕಟ್ಟಿ ಕುಳಿತುಕೊಳ್ಳುತ್ತಿದ್ದರು. ಆರೋಪಿಗಳ ಆಮಿಷ ಕ್ಕೊಳಗಾಗಿ ಸಾಕ್ಷಿದಾರರು ಪ್ರತಿಕೂಲ ಸಾಕ್ಷ್ಯ ನುಡಿ ಯುತ್ತಿದ್ದರು. ಎಫ್ಎಸ್‌ಎಲ್‌ ವರದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರಲಿಲ್ಲ. ಚಾರ್ಜ್‌ಶೀಟ್‌ ನಲ್ಲಿ ಸೂಕ್ತ ಸಾಕ್ಷ್ಯ ಉಲ್ಲೇಖಿಸುತ್ತಿರಲಿಲ್ಲ. ತನಿಖಾಧಿಕಾರಿಗಳು ಒಮ್ಮೆ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಸಿದರೆ ಮತ್ತೆ ಕೋರ್ಟ್‌ ಕಡೆ ಮುಖ ಮಾಡುತ್ತಿರಲಿಲ್ಲ. ಆರೋಪಿ ಗಳ ಚಲನ ವಲನಾ ಮೇಲೆ ನಿಗಾ ಇಡುತ್ತಿರಲಿಲ್ಲ.

Advertisement

ಹೀಗಾಗಿ ನಗರದಲ್ಲಿ ದಾಖಲಾಗುತ್ತಿದ್ದ ಶೇ.70ರಷ್ಟು ಪ್ರಕರಣಗಳು ಖುಲಾಸೆ ಗೊಳ್ಳುತ್ತಿದ್ದವು. ಇದೀಗ ಆರೋಪಿಗಳಿಗೆ ಶಿಕ್ಷೆ ಕೊಡಿ ಸಲು ವಿಫ‌ ಲರಾದ ಪೊಲೀಸರಿಗೆ ಜ್ಞಾಪನ, ಎಚ್ಚರಿಕೆ, ವಾಗ್ಧಂಡನೆ, ಛೀಮಾರಿ, ದಂಡ, ವಾರ್ಷಿಕ ವೇತನ ಬಡ್ತಿ ಮುಂದೂಡಿಕೆಯಂತಹ ಶಿಕ್ಷೆಗಳನ್ನು ನೀಡ ಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಆಕ್ಟಿವ್‌ ರಿವ್ಯೂ ಕಮಿಟಿ ಸಭೆಯಲ್ಲಿ ಪರಾಮರ್ಶೆ ನಡೆಸಿ ಲೋಪವೆಸಗಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲಾ ಮಟ್ಟದ ದೋಷಮುಕ್ತ ಮಂಡಳಿ ಶಿಫಾರಸ್ಸಿ ನಂತೆ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮವನ್ನೂ ಕೈಗೊಳ್ಳ ಲಾಗುತ್ತಿದೆ. ಹೀಗಾಗಿ, ಶಿಕ್ಷೆ ತಪ್ಪಿಸಿಕೊಳ್ಳಲು ಪೊಲೀ ಸರು ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಬಲವಾದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಯಾವ ಅಪರಾಧ ಹೆಚ್ಚಳ? ರಾಜ್ಯ ರಾಜಧಾನಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನ ಪ್ರಕರಣ ಮೊದಲ ಸ್ಥಾನದಲ್ಲಿದ್ದರೆ, ಸುಲಿಗೆ, ಡ್ರಗ್ಸ್‌ ಮಾರಾಟ, ಡಕಾಯಿತಿ, ದರೋಡೆ, ಹಲ್ಲೆ, ವರದಕ್ಷಿಣೆ ಕಿರುಕುಳ, ಕೊಲೆ, ಕೊಲೆಯತ್ನ ಜಾತಿ ನಿಂದನೆ, ಲೈಂಗಿಕ ದೌರ್ಜನ್ಯದಂತಹ ಕೇಸ್‌ಗಳು ನಂತರದ ಸ್ಥಾನದಲ್ಲಿವೆ. ಈ ಮಾದರಿಯ ಪ್ರಕರಣಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾಗುತ್ತಿದೆ. ವಂಚನೆ, ಸೈಬರ್‌ ಕ್ರೈಂ, ನಿಂದನೆ, ರಸ್ತೆ ಅಪಘಾತದಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆಯಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಪ್ರತಿ ಬಾರಿಯೂ ಸಾಕ್ಷ್ಯ ನುಡಿಯುವ ಮುನ್ನ ಸಾಕ್ಷಿದಾರರಿಗೆ ಈ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ದೋಷಾರೋಪ ಪಟ್ಟಿಯಲ್ಲೂ ಬಲವಾದ ಸಾಕ್ಷ್ಯ ಉಲ್ಲೇಖೀಸಲಾಗುತ್ತಿದೆ. ಹೀಗಾಗಿ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತಿದೆ.  –ಪಾಟೀಲ್‌ ವಿನಾಯಕ್‌ ವಸಂತ್‌ರಾವ್‌, ಡಿಸಿಪಿ, ಉತ್ತರ

●ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next